ಬೆಂಗಳೂರು:ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಎಂಟು ನಗರಗಳಲ್ಲಿ ಹೊರಡಿಸಿದ ರಾತ್ರಿ ಕರ್ಫ್ಯೂ ಯಶಸ್ವಿಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಡರಾತ್ರಿ ರೌಂಡ್ಸ್ ಹಾಕಿ, ಬಂದೋಬಸ್ತ್ ಪರಿಶೀಲಿಸಿದರು.
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ರ್ಕಾರ ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಮಾರ್ಗಸೂಚಿ ಹೊರಡಿಸುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಜಾರಿಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತ್ತು. ರಾತ್ರಿ 10 ರಿಂದ ಮುಂಜಾನೆ 5 ಗಂಟೆವರೆಗೆ ಅನಗತ್ಯ ವಾಹನ ಹಾಗೂ ಸಾರ್ವಜನಿಕರ ಸಂಚಾರ ಓಡಾಟಕ್ಕೆ ನಿರ್ಬಂಧ ಹೇರಿ, ರಾತ್ರಿ 10 ಗಂಟೆ ನಂತರ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಚಟುವಟಿಕೆ ಮೇಲೆ ನಿಯಂತ್ರಣ ವಿಧಿಸಲಾಗಿತ್ತು. ಇದನ್ನು ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಪಾಲಿಸಲಾಯಿತು.
ರಾತ್ರಿ ವೇಳೆ ಕಾರಣ ಇಲ್ಲದೆ ಅನಗತ್ಯವಾಗಿ ಓಡಾಟ ಮಾಡುವ ಸಾರ್ವಜನಿಕರು ಹಾಗೂ ವಾಹನಗಳ ಬಗ್ಗೆ ನಿಗಾವಹಿಸಿ ಕ್ರಮಕೈಗೊಳ್ಳಲಾಯಿತು. ಕಾನೂನು ಮೀರಿದವರ ವಿರುದ್ಧ ಹಲವು ಪ್ರಕರಣ ದಾಖಲಿಸಲಾಗಿದೆ. ನಗರದ ಪ್ರಮುಖ ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ನಿರ್ಬಂಧ ಹಾಗೂ ರಾತ್ರಿ ಕರ್ಫ್ಯೂೂ ಅನುಷ್ಠಾನ ಸಂಬಂಧ ಬಿಬಿಎಂಪಿ ಸೇರಿದಂತೆ ಇತರೆ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಿವೆ.