ಬೆಂಗಳೂರು: ಮಲೆನಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದು, ಮೊಬೈಲ್ ಟವರ್‌ಗಳ ಕೊರತೆಯನ್ನು ನೀಗಿಸಲು ಹೆಚ್ಚುವರಿ ಟವರ್‌ಗಳನ್ನು ಅಳವಡಿಸುವ ಬಗ್ಗೆ ಕ್ರಮ ಜರುಗಿಸಲಾಗಯವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವರು, ಮಲೆನಾಡು ಭಾಗದಲ್ಲಿ ಹೆಚ್ಚುವರಿ ಮೊಬೈಲ್ ಟವರ್‌ಗಳ ಅಳವಡಿಕೆ ಸಂಬಂಧ ಮುಖ್ಯಮಂತ್ರಿಗಳು ಈಗಾಗಲೇ ಕೇಂದ್ರದ ದೂರ ಸಂಪರ್ಕ ಸಚಿವರಿಗೆ ಪತ್ರ ಬರೆದು ಮೊಬೈಲ್ ಟವರ್‌ಗಳನ್ನು ಅಳವಡಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು. ಮೊಬೈಲ್ ಟವರ್‌ಗಳಿಲ್ಲದೆ ನೆಟ್‌ವರ್ಕ್ ಸಿಗದೆ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಮಲೆನಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಹೆಚ್ಚಿನ ಟವರ್ ಹಾಕಿ ಇದಕ್ಕೂ ವಿಷಯ ಪ್ರಸ್ತಾಪಿಸಿದ ಹರತಾಳು ಹಾಲಪ್ಪ, ಮಲೆನಾಡು ಭಾಗದಲ್ಲಿ ಮೊಬೈಲ್ ಟವರ್‌ಗಳಿಲ್ಲದೆ, ನೆಟ್‌ವರ್ಕ್ ಸಿಗದೆ ಮಕ್ಕಳ ಆನ್‌ಲೈನ್ ಪಾಠಕ್ಕೆ ತೊಂದರೆಯಾಗಿದೆ. ಪಡಿತರ ಪಡೆಯಲು, ರೈತರು ಪಹಣಿ ಪಡೆಯಲು, ಜಾತಿ ಪ್ರಮಾಣಪತ್ರ ಪಡೆಯಲು ತೊಂದರೆಯಾಗಿದೆ. ತಮ್ಮ ಕ್ಷೇತ್ರದ ಶೇ. 50ರಷ್ಟು ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ. ಇದರಿಂದ ಆನ್‌ಲೈನ್ ಪಾಠಕ್ಕೆ ತೊಂದರೆಯಾಗಿದೆ ಎಂದರು.
ನನ್ನ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಇದೇ ಗೋಳು. ಒಂದು ಟವರ್ ಹಾಕೋಕೆ 30ರಿಂದ 40 ಲಕ್ಷ ರೂ. ಖರ್ಚಾಗುತ್ತದೆ. ನಾವು ಹಾಕೋಕೆ ಸಾಧ್ಯವೇ?. ಮಕ್ಕಳ ಆನ್‌ಲೈನ್ ಪಾಠಕ್ಕೆ ತೊಂದರೆಯಾಗುತ್ತದೆ. ನೆಟ್‌ವರ್ಕ್ ಇಲ್ಲವಾದರೆ ಎಲ್ಲಿ ಪಾಠ ಕೇಳೋಕೆ ಸಾಧ್ಯ. ಮಕ್ಕಳು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸಬೇಕು. ತಮ್ಮ ಕ್ಷೇತ್ರದ ಕಟ್ಟಿನಕಾರದಲ್ಲಿ ಶಾಲಾ ಮಕ್ಕಳು ಇಂದು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮಘಟ್ಟಗಳ 20-30 ತಾಲೂಕುಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಮಕ್ಕಳು ಆನ್‌ಲೈನ್ ಪಾಠದಿಂದ ವಂಚಿತರಾಗುವುದನ್ನು ತಪ್ಪಿಸಲು ಹೆಚ್ಚುವರಿ ಮೊಬೈಲ್ ಟವರ್‌ಗಳನ್ನು ಅಳವಡಿಸುವಂತೆ ಆಗ್ರಹಿಸಿದರು.