ನವದೆಹಲಿ:ರಸಗೊಬ್ಬರ ತಯಾರಿಕಾ ಸಂಸ್ಥೆ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ (ಇಫ್ಕೊ) ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದೆ. ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ನ್ಯಾನೋ ಯೂರಿಯಾವನ್ನು ಇಂದು ಅಧಿಕೃತವಾಗಿ ಪರಿಚಯಿಸಲಾಯಿತು. ಇಫ್ಕೋದ 50ನೇ ವಾರ್ಷಿಕ ಸಭೆಯಲ್ಲಿ ಇಂದುಈ ನ್ಯಾನೊ ಯೂರಿಯಾ ಮಾರುಕಟ್ಟೆಗೆ ಪರಿಚಯ ಮಾಡಲಾಯಿತು.
ಇಂದು ಇಫ್ಕೋದಿಂದ ಅಧಿಕೃತ ಘೋಷಣೆ ಈ 'ನ್ಯಾನೊ ಯೂರಿಯಾ' ದ್ರವ ರೂಪದಲ್ಲಿದ್ದು, 500 ಮಿಲಿ ಲೀಟರ್ ಬಾಟಲಿಗೆ ₹ 240 ಬೆಲೆ ನಿಗದಿ ಮಾಡಲಾಗಿದೆ. ಸಾಮಾನ್ಯ ಬಳಕೆಯಲ್ಲಿರುವ ಯೂರಿಯಾ ಚೀಲದ ಬೆಲೆಗಿಂತಲೂ ಶೇ 10ರಷ್ಟು ಕಡಿಮೆ ದರದಲ್ಲಿ ನ್ಯಾನೊ ಯೂರಿಯಾ ರೈತರಿಗೆ ದೊರೆಯಲಿದೆ.
ಇಂದು ಇಫ್ಕೋದಿಂದ ಅಧಿಕೃತ ಘೋಷಣೆ ಇಫ್ಕೊದ ದ್ರವ ರೂಪದ ಯೂರಿಯಾ ತಯಾರಿಕೆಯು ಜೂನ್‌ನಿಂದ ಆರಂಭವಾಗಲಿದೆ. ಇಫ್ಕೊ ಇ–ಕಾಮರ್ಸ್ ವೇದಿಕೆ (www.iffcobazar.in) ಸೇರಿದಂತೆ ಸಹಕಾರ ಮಾರಾಟ ಮತ್ತು ಮಾರುಕಟ್ಟೆಗಳ ಮೂಲಕ ರೈತರಿಗೆ ನ್ಯಾನೊ ಯೂರಿಯಾ ಖರೀದಿಗೆ ಸಿಗಲಿದೆ.
ಈ ಬಗ್ಗೆ ಮೇ 29 ರಂದು ಸದಾನಂದಗೌಡ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದರು.
ಬೆಂಗಳೂರು:ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಸಿರುವ ನ್ಯಾನೋ-ಯೂರಿಯಾ ರಸಗೊಬ್ಬರವು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
240 ರೂಪಾಯಿ ಬೆಲೆಯ 500 ಎಂಎಲ್ ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಕ್ಕೆ ಸಮನಾಗಿದ್ದು ಜೂನ್ 15ನೇ ತಾರೀಖಿನಂದು ಮುಕ್ತ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನ್ಯಾನೋ-ಯುರಿಯಾ ಉಪಯೋಗದ ಬಗ್ಗೆ ಇಫ್ಕೋ ಸಂಸ್ಥೆಯವರು ಇಂದು ಏರ್ಪಡಿಸಿದ್ದ ವೆಬ್ಬಿನಾರ್ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು - ಇದು ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಸಾಗುವಳಿ ವೆಚ್ಚದಲ್ಲಿ ಪ್ರತಿಶತ 15 ರಷ್ಟು ಕಡಿತ
ನ್ಯಾನೋ ರಸಗೊಬ್ಬರದಿಂದ ಸಾಗುವಳಿ ವೆಚ್ಚದಲ್ಲಿ ಸುಮಾರು 15 ಪ್ರತಿಶತ ಕಡಿಮೆಯಾಗಲಿದೆ. ಇನ್ನು ಇಳುವರಿಯಲ್ಲಿ 15ರಿಂದ 20ರಷ್ಟು ಹೆಚ್ಚಳವಾಗಲಿದೆ ಎಂದ ಸಚಿವರು ರೈತರು ಇದನ್ನು ಹೆಚ್ಚೆಚ್ಚು ಬಳಕೆ ಮಾಡಿ ಇದರ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತದಲ್ಲಿ ಈ ವರ್ಷ 350 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಆದರೆ, ಈಗ ನ್ಯಾನೋ ಯೂರಿಯಾ ಮಾರುಕಟ್ಟೆಗೆ ಬರುತ್ತಿರುವದರಿಂದ ಮಾಮೂಲಿ ಯೂರಿಯಾ ಬಳಕೆ ಗಣನೀಯವಾಗಿ ಕಡಿಮೆಯಾಗಲಿದ್ದು, ಸುಮಾರು 600 ಕೋಟಿ ರೂ ಸಬ್ಸಿಡಿ ಉಳಿತಾಯವಾಗಲಿದೆ. ಯೂರಿಯಾ ಆಮದು ಕಡಿಮೆಯಾಗಿ ವಿದೇಶಿ ವಿನಿಮಯ ಉಳಿಯಲಿದೆ. ಎಲ್ಲ ದೃಷ್ಟಿಯಿಂದಲೂ ನ್ಯಾನೋ ಯೂರಿಯಾ ಲಾಭಕರವಾಗಿದ್ದು ಇದನ್ನು ಜನಪ್ರಿಯಗೊಳಿಸಲು ಸರ್ಕಾರವು ಗಮನಹರಿಸಲಿದೆ ಎಂದರು.
ಈ ಶತಮಾನ ನ್ಯಾನೋ ತಂತ್ರಜ್ಞಾನಕ್ಕೆ ಸೇರಿದ್ದಾಗಿದೆ. ಈಗ ಕೃಷಿಯಲ್ಲೂ ಇದರ ಪ್ರವೇಶವಾಗಿದೆ. ನ್ಯಾನೋ ಯೂರಿಯಾ ಕೃಷಿಗೆ ಹೊಸ ಆಯಾಮ ನೀಡಲಿದೆ. ಮಣ್ಣಿನ ಪೌಷ್ಟಿಕಾಂಶ ಕಾಪಾಡಿಕೊಳ್ಳುವುದರ ಜೊತೆಗೇ ಸಾಗುವಳಿ ಹಾಗೂ ಸಾಗಣೆ ವೆಚ್ಚದಲ್ಲಿ ಅಪಾರ ಉಳಿತಾಯ ಮಾಡಲಿದೆ ಎಂದು ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಎಸ್. ಅವಸ್ಥಿ ತಿಳಿಸಿದರು
ಕಾಗದಪತ್ರ ಇಲ್ಲದೆ ಯಾರೂ ಬೇಕಾದರೂ ಖರೀದಿಸಬಹುದು
ಇಫ್ಕೋ ನಿರ್ದೇಶಕ (ಮಾರುಕಟ್ಟೆ) ಯೋಗೇಂದ್ರಕುಮಾರ್ ಮಾತನಾಡಿ ಆರಂಭಿಕವಾಗಿ 28 ಕೋಟಿ ಬಾಟಲಿ (500 ಎಂಎಲ್) ನ್ಯಾನೋ ಯೂರಿಯಾ ಉತ್ಪಾದಿಸಲಾಗುತ್ತಿದೆ. ಇದರ ಬೆಲೆ ಬಾಟಲಿಗೆ 240 ರೂ. ಸರಕಾರದಿಂದ ಯಾವುದೇ ರೀತಿಯ ಸಬ್ಸಿಡಿ ಇಲ್ಲದಿರುವುದರಿಂದ ಇದನ್ನು ಯಾವುದೇ ಕಾಗದಪತ್ರ ಇಲ್ಲದೆ ಯಾರೂ ಬೇಕಾದರೂ ಖರೀದಿಸಬಹುದು ಎಂದರು.
ಇಫ್ಕೋ ಕರ್ನಾಟಕ ಮಾರುಕಟ್ಟೆ ವ್ಯವಸ್ಥಾಪಕ ಡಾ ಸಿ ನಾರಾಯಣಸ್ವಾಮಿ ಮಾತನಾಡಿ - ನ್ಯಾನೋ ಯೂರಿಯಾವನ್ನು ಕೀಟನಾಶಕ ಸಿಂಪರಣೆ ಮಾಡಿದಂತೆಯೇ ಮಾಡಬೇಕಾಗುತ್ತದೆ. ಮಾಮೂಲಿ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಿದಂತೆ ಬೆರೆಸುವುದು ಅಲ್ಲ. ಒಂದು ಲೀಟರ್ ನೀರಿಗೆ ಕೇವಲ 2 ಎಂಎಲ್ ನ್ಯಾನೋ ಯೂರಿಯಾ ಮಿಶ್ರಣ ಮಾಡಿದರೆ ಸಾಕು. ಕೀಟನಾಶಕ ಸಲಕರಣೆಯನ್ನೇ ಬಳಸಿ ಇದನ್ನು ಸಿಂಪಡಿಸಬಹುದು ಎಂದು ವಿವರಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸರ್ಕಾರದ ಕೃಷಿ ನಿರ್ದೇಶಕ ಡಾ.ಬಿ.ವೈ. ಶ್ರೀನಿವಾಸ್; NBRC ಕಲೋಲ್ ಜನರಲ್ ಮ್ಯಾನೇಜರ್ (ನ್ಯಾನೋ ಟೆಕ್ನಾಲಜಿ) ಡಾ. ರಮೇಶ್ ರಾಲಿಯಾ; ಐಸಿಯೆಅರ್ (ಅಟಾರಿ) ನಿರ್ದೇಶಕ ಡಾ.ವೆಂಕಟಸುಬ್ರಮಣಿಯನ್ ಚರ್ಚೆಯಲ್ಲಿ ಪಾಲ್ಗೊಂಡರು.