ಬೆಂಗಳೂರು :ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ರಚನೆಯಾಗಿದ್ದ ವಿ ಎಸ್ ಉಗ್ರಪ್ಪ ನೇತೃತ್ವದ ಸಮಿತಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ತನ್ನ ವರದಿ ಸಲ್ಲಿಕೆ ಮಾಡಿದೆ. ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರನ್ನು ಭೇಟಿಯಾದ ಸಮಿತಿ ಮೈಸೂರು ಅತ್ಯಾಚಾರ ಪ್ರಕರಣದ ವರದಿ ನೀಡಿದೆ.
ಮೈಸೂರಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವಿ ಎಸ್ ಉಗ್ರಪ್ಪ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ವರದಿ ಸಿದ್ಧಪಡಿಸಲು ಸೂಚಿಸಲಾಗಿತ್ತು. ತಂಡ ಮೈಸೂರಿಗೆ ತೆರಳಿ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಇದೇ ವಿಸ್ತೃತ ವರದಿಯನ್ನು ಇಂದು ಸಮಿತಿ ಸಲ್ಲಿಕೆ ಮಾಡಿದೆ.
ವರದಿ ಸಲ್ಲಿಕೆ ನಂತರ ಮಾತನಾಡಿದ ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಅತ್ಯಾಚಾರ ಆದ ತಕ್ಷಣ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಬೇಕು. ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಸಂತ್ರಸ್ತೆಯ ಹೇಳಿಕೆ ಮಾಡಿಸಬೇಕಿತ್ತು. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡಿಸಬೇಕಿತ್ತು. ಈವರೆಗೆ ಆ ಹೆಣ್ಣುಮಗಳು ಹೇಳಿಕೆ ಕೊಟ್ಟಿಲ್ಲ. ಹೇಳಿಕೆ ಕೊಡದಿದ್ದರೆ ತನಿಖೆ ಚುರುಕಾಗಲ್ಲ ಎಂದು ಹೇಳಿದ್ದಾರೆ.
ಆರೋಪಿಗಳನ್ನು ಸಂತ್ರಸ್ತೆ ಮುಂದೆ ಪರೇಡ್ ಮಾಡಿಸಿ :ಗೃಹ ಸಚಿವರು ವಿವಾದಾತ್ಮಕ ಹೇಳಿಕೆ ಕೊಡ್ತಾರೆ. ಗೃಹ ಸಚಿವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. 376(ಡಿ) ಕೇಸ್ ದಾಖಲಿಸಬೇಕು. ಆದರೆ, ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ.