ಬೆಂಗಳೂರು: ಚುನಾವಣಾ ಆಯೋಗ ಅನರ್ಹರೆಂದು ಘೋಷಿಸಿದ ಬಳಿಕವೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಿಲು ಕಾನೂನಿನಲ್ಲಿ ಹೇಗೆ ಸಾಧ್ಯ ಎಂದು ಶಾಸಕ ಮುನಿರತ್ನ ಚುನಾವಣಾ ಅಕ್ರಮದ ಬಗ್ಗೆ ಹೈಕೋರ್ಟ್ ಪ್ರಶ್ನಿಸಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಚುನಾವಣಾ ಅಕ್ರಮ ಎಸಗಿದ್ದಾರೆ. ಹೀಗಾಗಿ ಮುನಿರತ್ನ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜಯಿ ಎಂದು ಘೋಷಿಸಬೇಕು ಎಂದು ಕೋರಿ ಮುನಿರಾಜುಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಮುನಿರತ್ನ ಪರ ವಕೀಲ ಎಂ. ಶಿವಪ್ರಕಾಶ್, ಚುನಾವಣಾ ತಕರಾರು ಅರ್ಜಿ ಸಲ್ಲಿಸಿರುವ ಮತ್ತು ತಮ್ಮನ್ನು ಶಾಸಕ ಎಂದು ಘೋಷಿಸಲು ಕೋರಿ ಅರ್ಜಿ ಸಲ್ಲಿಸಿರುವ ಮುನಿರಾಜುಗೌಡ ಅವರು ಚುನಾವಣಾ ಆಯೋಗಕ್ಕೆ ಲೆಕ್ಕಪತ್ರವನ್ನೇ ಸಲ್ಲಿಸಿಲ್ಲ. ಹೀಗೆ ಲೆಕ್ಕಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮುನಿರಾಜುಗೌಡ ಅವರನ್ನು ಅನರ್ಹಗೊಳಿಸಿದೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಮುನಿರಾಜುಗೌಡ ಪರ ವಕೀಲರನ್ನು ಉದ್ದೇಶಿಸಿ, ಚುನಾವಣೆಗೆ ಸ್ಪರ್ಧಿಸದಂತೆ ಆಯೋಗ ಅನರ್ಹಗೊಳಿಸಿದೆ. ಹೀಗಿದ್ದೂ, ಮುನಿರಾಜುಗೌಡ ವಿಜಯಿಯೆಂದು ಘೋಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಜತೆಗೆ ಈ ಕುರಿತಂತೆ ಕಾನೂನಾತ್ಮಕ ಅಂಶಗಳನ್ನು ಸ್ಪಷ್ಟಪಡಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು. ಪೀಠದ ಪ್ರಶ್ನೆಗೆ ಉತ್ತರಿಸಲು ಮುನಿರಾಜುಗೌಡ ಪರ ವಕೀಲರು ಕಾಲಾವಕಾಶ ಕೋರಿದ್ದು, ಮನವಿ ಪರಿಗಣಿಸಿದ ಪೀಠ ವಿಚಾರಣೆಯನ್ನು ಫೆ.26 ಕ್ಕೆ ಮುಂದೂಡಿದೆ.