ಬೆಂಗಳೂರು :ಹಾಸನ ಜಿಲ್ಲೆಯ ಬೇಲೂರು ಸಮೀಪದ ಚೌಡೇನಹಳ್ಳಿ ಬಳಿ ನಡೆದ ಮಂಗಗಳ ಮಾರಣ ಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿರುವ ಹೈಕೋರ್ಟ್, ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಮಂಗಗಳ ದಾರುಣ ಸಾವಿನ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಹಾಗೂ ನ್ಯಾ.ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ಹಾಜರಾದ ವಕೀಲ ವಿ. ಶ್ರೀನಿ ಅವರು ತನಿಖೆಯ ಪ್ರಾಥಮಿಕ ಮಾಹಿತಿ ಸಲ್ಲಿಸಿದರು. ಅರಣ್ಯ ಇಲಾಖೆಯ ಹಾಸನ ಡಿಸಿಎಫ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಇನ್ನು, ಮಂಗಗಳ ಸಾವಿನ ಕುರಿತು ಎಫ್ಐಅರ್ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು 7 ಮಂದಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯಲ್ಲಿ 38 ಕೋತಿಗಳು ಸಾವನ್ನಪ್ಪಿದ್ದು, 12 ಕೋತಿಗಳು ತಪ್ಪಿಸಿಕೊಂಡಿವೆ. ಮಂಗಗಳಿಗೆ ವಿಷ ಪೂರಿತ ಆಹಾರ ನೀಡಿರುವುದೇ ಅವುಗಳ ಸಾವಿಗೆ ಕಾರಣ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿದೆ. ಮಂಗಗಳ ಮೃತದೇಹದ ಸ್ಯಾಂಪಲ್‌ನ ಮೈಸೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗೆ ನಿರೀಕ್ಷಿಸಲಾಗುತ್ತಿದೆ ಎಂದು ವಿವರಿಸಿದರು.