ನೆಲಮಂಗಲ: ಒಂದು ನೋಟ್ ಕೊಟ್ಟರೆ ಮೂರು ನೋಟ್ ಕೊಡುವುದರ ಜೊತೆಗೆ, ಹಣ ಪ್ರಿಂಟ್ ಮಾಡುವ ಡೆಮೋ ತೋರಿಸುವ ನೆಪದಲ್ಲಿ ಜನರ ಗಮನ ಬೇರೆಡೆ ಸೆಳೆದು ವಂಚಿಸುತ್ತಿದ್ದ ಮೂವರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
'ಮನಿ ಡಬ್ಲಿಂಗ್' ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಖದೀಮರ ಬಂಧನ ಒಳ್ಳಾರಿ ಜಿಲ್ಲೆ ಸಿರಗುಪ್ಪ ಮೂಲದ ಖಾನ್ ಹುಸೇನ್ (58) ಹಳೇಕೋಟೆಯ ರಾಜಶೇಖರ್(28) ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನ ಗೌಸ್ ಸಾಬ್ (42) ಸೆರೆಸಿಕ್ಕ ಆರೋಪಿಗಳು. ಇವರಿಂಗ 11,600 ನಗದು, ಕೆಮಿಕಲ್ ದ್ರವ, ಕಪ್ಪು ಶಾಯಿ ಸೇರಿದಂತೆ ಪೇಪರ್ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬಳ್ಳಾರಿ ಜಿಲ್ಲೆ ಸಿರಗುಪ್ಪದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಕಳೆದೆರಡು ದಿನಗಳಿಂದ ಬೆಂಗಳೂರು ಉತ್ತರ ತಾಲ್ಲೂಕು ಮಾಕಳಿ ಬಳಿಯ ಲಾಡ್ಜ್ ಒಂದರಲ್ಲಿ ರೂಮ್ ಮಾಡಿಕೊಂಡಿದ್ದರು. ತಾಲೂಕಿನ ಮಲ್ಲರ ಬಾಣವಾಡಿ ಗ್ರಾಮದ ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆ ಬಳಿ ಮೂವರು ಅಪರಿಚಿತ ವ್ಯಕ್ತಿಗಳು 1 ನೋಟು ಕೊಟ್ರೆ 3 ನೋಟು ಕೊಡ್ತೀವಿ, ದ್ರಾವಣಗಳನ್ನು ಹಾಕಿ ಹಣವನ್ನು ದ್ವಿಗುಣ ಮಾಡ್ತೀವಿ ಅಂತ ಮೋಸ ಮಾಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಠಾಣಾ ಪಿಎಸ್‌ಐ ಹೆಚ್.ಟಿ.ವಸಂತ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಖದೀಮರನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ಸಿರಗುಪ್ಪ, ಇಳಿಕಲ್ಲು, ಕಾಲ್ ಬಸಾರ್, ತುಮಕೂರು ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಮನಿ ಡಬ್ಲಿಂಗ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದರು ಎಂದು ತಿಳಿದು ಬಂದಿದೆ.