ಬೆಂಗಳೂರು: ನಗರದ ರಸ್ತೆ ಗುಂಡಿಗಳು ಶಾಸಕರ ಅಕ್ರಮಗಳಿಗೆ ಹಿಡಿದ ಕೈಗನ್ನಡಿಯಾಗಿವೆ. ಅದರಲ್ಲೂ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಘು, ಸಾವಿರಾರು ಕೋಟಿ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತಂದರೂ ಅಭಿವೃದ್ಧಿಯಾಗದಿರುವುದಕ್ಕೆ ಮಾಡಿರುವ ಶೇ 40 ರಷ್ಟು ಭ್ರಷ್ಟಾಚಾರವೇ ಕಾರಣ. ಇದಕ್ಕೆ ಸಾಕ್ಷಿಯಾಗಿ ರಸ್ತೆ ತುಂಬಾ ಗುಂಡಿಗಳಿವೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ರಸ್ತೆ ಗುಂಡಿಗಳು ಮತ್ತು ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ನಡೆಸುತ್ತಿರುವ 10 ದಿನಗಳ ಸಹಿ ಸಂಗ್ರಹ ಅಭಿಯಾನ ಮತ್ತು ಪ್ರತಿಭಟನಾ ಜಾಥಾದಲ್ಲಿ ನಿನ್ನೆ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೋಹನ್ ದಾಸರಿ ಮಾತನಾಡಿದರು.
ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳಿವೆ. ಶಾಸಕರು ತಮ್ಮ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಹೀಗಾಗಿ, ಜನರು ಪ್ರಾಣ ಭಯದಲ್ಲಿ ರಸ್ತೆಗಳ ಮೇಲೆ ಓಡಾಡುತ್ತಿದ್ದು, ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.