ಬೆಂಗಳೂರು: ಅಂಶದಾಯಿ ಪಿಂಚಣಿ ಕೊಡುಗೆ ಯೋಜನೆಯಡಿ ಬರುವ ಸರ್ಕಾರಿ ನೌಕರರಿಗೆ ನಿವೃತ್ತಿ ಉಪಧನ, ಮರಣ ಮತ್ತು ಕುಟುಂಬ ಪಿಂಚಣಿಯನ್ನು ವಿಸ್ತರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಸದಸ್ಯರಾದ ಆಯನೂರು ಮಂಜುನಾಥ್ ಮತ್ತು ಎಸ್.ವಿ.ಸಂಕನೂರು, ಮರಿತಿಬ್ಬೇಗೌಡ, ಪುಟ್ಟಣ ಮಂಡಿಸಿರುವ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರ ನೀಡಿದರು.
ಪ್ರಶ್ನೆ ಕೇಳಿದ ಸದಸ್ಯರು ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ 2006ರ ಏ.1ರ ಪೂರ್ವದ ಸೇವೆಯನ್ನು ಪರಿಗಣಿಸದೇ ಇರುವುದರಿಂದ ಈ ನೌಕರರ ಪಿಂಚಣಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಕಾರಣದಿಂದ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ತೀರ್ಪಿನನ್ವಯ ನೌಕರರು ಸೇವೆಗೆ ಸೇರಿದ ದಿನಾಂಕದಿಂದ ನಿವೃತ್ತಿವರೆಗಿನ ವೇತನವನ್ನು ನಿಗದಿ ಪಡಿಸುವ ಜೊತೆಗೆ ಹಳೆಯ ನಿಶ್ಚಿತ ಪಿಂಚಣಿ(O.P.S) ಸೌಲಭ್ಯವನ್ನು ಒದಗಿಸುವ ಕುರಿತು ಸಚಿವರ ಗಮನ ಸೆಳೆದಿದ್ದರು.
ಇದಕ್ಕೆ ಉತ್ತರ ನೀಡಿದ ಸಚಿವರು, ಈ ದಿನಾಂಕದ ನಂತರ ನೇಮಕಾತಿ ಹೊಂದಿದ ಸಿಬ್ಬಂದಿಗೆ ಕಡ್ಡಾಯವಾಗಿ ಸರ್ಕಾರದ ಆದೇಶದನ್ವಯ ನೂತನ ಪಿಂಚಣಿ ಯೋಜನೆ ಅನ್ವಯವಾಗುತ್ತದೆ. ಸರ್ಕಾರದ ಇನ್ನೊಂದು ಆದೇಶದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ 2006ರ ಏ.1ರಿಂದ ಪಿಂಚಣಿ ನೀತಿಯಲ್ಲಿ ಅನುದಾನಿತ ಶಾಲೆಗಳ ನೌಕರರಿಗೆ ಪಿಂಚಣಿ ಒದಗಿಸುವ ಕುರಿತು ಮೇಲ್ಕಂಡ ಸರ್ಕಾರದ ಆದೇಶದ ಕ್ರಮ ಸಂಖ್ಯೆ 8ರಲ್ಲಿ ಈ ಕೆಳಗಿನಂತೆ ಆದೇಶಿಸಿದೆ ಎಂದರು.
ಸಹಾಯಾನುದಾನದ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಗೊತ್ತು ಮಾಡಿದ ಪಿಂಚಣಿಯನ್ನು ಅಂದು ಅಥವಾ ಅದರ ತರುವಾಯ ಸೇರುವ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ನಿಲ್ಲಿಸಿ ಬಿಡತಕ್ಕದ್ದು, ನೂತನ ನಿಗದಿತ ವಂತಿಗೆ ಪಿಂಚಣಿ ಯೋಜನೆಯು, ಆಯ್ಕೆಯ ಅವಕಾಶದ ಆಧಾರದ ಮೇಲೆ ನೌಕರನಿಗೆ ಮತ್ತು ನಿಯೋಜಕನಿಗೆ ಅನ್ವಯವಾಗತಕ್ಕದ್ದು ಮತ್ತು ಆಯ್ಕೆಯ ಅವಕಾಶವನ್ನು ಇಬ್ಬರಿಂದಲೂ ಚಲಾಯಿಸತಕ್ಕದ್ದು, ಆದರೆ, ವಿಯೋಜಕರ ವಂತಿಗೆಯನ್ನು ಸಂಬಂಧಪಟ್ಟ ಸಂಸ್ಥೆಗಳು ಭರಿಸತಕ್ಕದ್ದು. ಆದರೆ ರಾಜ್ಯ ಸರ್ಕಾರವಲ್ಲ ಎಂದು ತಿಳಿದಿದೆ ಎಂಬ ವಿವರಣೆ ನೀಡಿದರು.
ಈ ಪಿಂಚಣಿ ಯೋಜನೆಯು ಸಂಪೂರ್ಣವಾಗಿ ಸ್ವ-ಇಚ್ಚಾ ನೆಲೆಯಲ್ಲಿ ಜಾರಿಗೊಳಿಸುವುದರಿಂದ ಕಡ್ಡಾಯಗೊಳಿಸಲು ಅವಕಾಶವಿರುವುದಿಲ್ಲ. ಆದಾಗ್ಯೂ ಸದಸ್ಯರು ಒತ್ತಡ ಹೇರುತ್ತಿರುವ ಹಿನ್ನೆಲೆ ಇನ್ನೊಮ್ಮೆ ಅಧಿಕಾರಿಗಳ ಜತೆ ಈ ಬಗ್ಗ ಚರ್ಚಿಸಿ ಕೈಲಾದ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ರೈಲು ಅಪಘಾತ, ಮೂರು ಭಾಗಗಳಾದ ಟಿಪ್ಪರ್..