ಬೊಮ್ಮನಹಳ್ಳಿ(ಬೆಂಗಳೂರು): ಹೆಚ್ಎಸ್ಆರ್ ಬಡಾವಣೆಯಲ್ಲಿ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಇಂಧನ ಖಾತೆ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಡಿಸೆಂಬರ್ ಅಂತ್ಯದ ವೇಳೆಗೆ ಮೊದಲ ಹಂತದ ಮತ್ತು ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ದೇಶದಲ್ಲಿಯೇ ಮಾದರಿ ಇಂಧನ ಇಲಾಖೆಯ ತರಬೇತಿ ಕೇಂದ್ರವನ್ನು ಜನವರಿ ತಿಂಗಳಲ್ಲಿ ಸ್ಥಾಪಿಸಿ, ಉಳಿದೆಲ್ಲ ಕಾಮಗಾರಿಗಳ ವೇಗ ಹೆಚ್ಚಿಸಬೇಕೆಂದು ಸೂಚಿಸಿದರು.
ಶಾಸಕ ಎಂ. ಸತೀಶ್ ರೆಡ್ಡಿ ಮಾತನಾಡಿ, ಹೆಚ್ಎಸ್ಆರ್ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಮಾಂಡ್ ಸೆಂಟರ್‌ಗೆ ವಿದೇಶಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಇಡೀ ಬೆಂಗಳೂರು ವಿದ್ಯುತ್ ನಿಯಂತ್ರಣ ಮತ್ತು ಸುಲಭವಾಗಿ ಪವರ್ ಫೈಲ್ಯುರ್ ಕಂಡು ಹಿಡಿಯುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಜನವರಿ ತಿಂಗಳಲ್ಲಿ ಮುಖ್ಯಮಂತ್ರಿಗಳು ಈ ಭವನವನ್ನು ಉದ್ಘಾಟನೆಗೊಳಿಸಲಿದ್ದಾರೆ ಎಂದು ತಿಳಿಸಿದರು.
ಎಂ.ಡಿ.ರಾಜೇಂದ್ರ ಕುಮಾರ್ ಚೋಳನ್ ಮಾತನಾಡಿ, ಹೊಸ ತಂತ್ರಜ್ಞಾನ ಬಳಸಿ ಇನೋವೇಶನ್ ಲ್ಯಾಬ್ ತೆರೆಯಲಾಗುತ್ತಿದೆ. ಇಂಜಿನಿಯರ್ಗಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಈ ತರಬೇತಿ ಕೇಂದ್ರ ಅನುಕೂಲಕರವಾಗಲಿದೆ. ಟೆಸ್ಟಿಂಗ್ ಲ್ಯಾಬ್, ಕಾಲ್ ಸೆಂಟರ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇಇ ಜ್ಯೋತಿ ಪ್ರಕಾಶ್, ಬೆಸ್ಕಾಂ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.