ಬೆಂಗಳೂರು: ಐಎಎಸ್, ಐಪಿಎಸ್ ಆಯ್ಕೆಗೆ ಅದರದ್ದೇ ಆದ ಪರೀಕ್ಷಾ ವ್ಯವಸ್ಥೆ ಇದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಯಾವ ವ್ಯವಸ್ಥೆಯಲ್ಲಿ ಬದುಕಿದ್ದಾರೋ ಗೊತ್ತಿಲ್ಲ. ಅವರು ಪಾಕಿಸ್ತಾನದ ವ್ಯವಸ್ಥೆ ಬಗ್ಗೆ ಮಾತನಾಡಿರಬೇಕು. ಆದರೆ, ಇದು ಭಾರತ ಎಂದು ಹೆಚ್ಡಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಒಂದು ಪುಸ್ತಕದಲ್ಲಿ ಬರೆದಿರುವುದೆಲ್ಲ ನಿಜವಾಗಿ ಇರುವುದಿಲ್ಲ. ಅವರವರ ಭಾವನೆಗಳಿಗೆ ತಕ್ಕ ರೀತಿಯಲ್ಲಿ ಹಲವಾರು ಜನ ಪುಸ್ತಕಗಳನ್ನು ಬರೆದಿರುತ್ತಾರೆ. ಅದನ್ನೇ ಆಧಾರವಾಗಿಟ್ಟುಕೊಂಡು ಆರ್‌ಎಸ್‌ಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ.
ಆರ್‌ಎಸ್‌ಎಸ್ ದೇಶಭಕ್ತಿ ಸಂಸ್ಥೆ. ಅವರ ತ್ಯಾಗದ ಫಲದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ದೇಶದಲ್ಲಿ ಉಳಿದಿದೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಇಡೀ ದೇಶದಲ್ಲಿ ಅಂದು ಬಂಧನಕ್ಕೆ ಒಳಗಾಗಿದ್ದವರಲ್ಲಿ ಶೇ.80ರಷ್ಟು ಆರ್‌ಎಸ್‌ಎಸ್ ಹಿನ್ನೆಲೆಯವರು ಇದ್ದಾರೆ. 2ನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದವರು ಪ್ರಮುಖವಾಗಿ ಆರ್‌ಎಸ್‌ಎಸ್ ನವರು. ಅವರಿಗೆ ಯಾವುದೇ ರಾಜಕೀಯ ಗಂಧ ಗಾಳಿ ಇಲ್ಲ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಎಸ್ಎಸ್ಎಲ್ಸಿ, ಇಂಜಿನಿಯರಿಂಗ್ ಪಾಸಾಗಲು ಪರೀಕ್ಷೆ ಹೇಗಿದೆಯೋ ಹಾಗೆ ಐಎಎಸ್ - ಐಪಿಎಸ್ ಪಾಸಾಗಲು ಪರೀಕ್ಷೆ ಇದೆ. ಅದರಲ್ಲಿ ನೀವು ತಪ್ಪುಗಳನ್ನು ಹುಡುಕಲು ಹೊರಟರೆ ಹೇಗೆ?, ಆ ವ್ಯವಸ್ಥೆ ಸರಿ ಇಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಹೆಚ್ಡಿಕೆ ಅವರ ನಿಲುವು ಬದಲಾಗುತ್ತಲೇ ಇರುತ್ತದೆ:
ಆರ್‌ಎಸ್‌ಎಸ್ ಬಗ್ಗೆ ಕುಮಾರಸ್ವಾಮಿಗೆ ತಪ್ಪು ತಿಳಿವಳಿಕೆ ಇದೆ. ಆರ್‌ಎಸ್‌ಎಸ್ ದೇಶ ಪ್ರೇಮಿಗಳನ್ನು, ದೇಶ ಭಕ್ತರನ್ನು ಕಟ್ಟುವ ಸಂಸ್ಥೆ. ಅದರ ಬಗ್ಗೆ ಯಾವುದೇ ರೀತಿಯ ಟೀಕೆಗಳನ್ನು ಮಾಡುವ ಅಧಿಕಾರವನ್ನ ಯಾರೂ ಕುಮಾರಸ್ವಾಮಿಗೆ ಕೊಟ್ಟಿಲ್ಲ.
ಕುಮಾರಸ್ವಾಮಿ ಯಾವಾಗಲೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಟೀಕೆ ಮಾಡುತ್ತಾರೆ. ಅವರಿಗೆ ಒಂದು ನಿಲುವಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಒಂದೊಂದು ರೀತಿಯಲ್ಲಿ ನಿಲುವು ವ್ಯಕ್ತಪಡಿಸುತ್ತಾರೆ. 2006ರಲ್ಲಿ ಮೊದಲು ಬಿಜೆಪಿ ಜತೆ ಬಂದಿದ್ದರು. ಆದರೆ, ಈ ಬಾರಿ ಬಿಜೆಪಿ ಹೆಚ್ಚು ಸ್ಥಾನ ಬಂದರೂ ಕಾಂಗ್ರೆಸ್ ಜತೆ ಹೋದರು. ಪ್ರತಿ ನಿಮಿಷಕ್ಕೂ ಅವರ ನಿಲುವು ಬದಲಾಗುತ್ತಲೇ ಇರುತ್ತದೆ ಎಂದು ಟೀಕಿಸಿದರು.