ಬೆಂಗಳೂರು :ಒಂದು ವೇಳೆ ಕೋವಿಡ್ ತೀವ್ರತೆ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲು ನಾವು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಶಾಲೆ-ಕಾಲೇಜುಗಳ ಬಂದ್ ಕುರಿತಂತೆ ಸಚಿವ ಬಿ ಸಿ ನಾಗೇಶ್ ಹೇಳಿಕೆ ನೀಡಿರುವುದು.. ಕೋವಿಡ್ ಹೆಚ್ಚಾದ್ರೆ ಶಾಲೆ ಬಂದ್ :ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನವಾದ ಇಂದು ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಜ್ಞರಿಂದ ಪ್ರತಿದಿನವೂ ವರದಿ ಪಡೆದುಕೊಳ್ಳುತ್ತಿದ್ದೇವೆ.
ವರದಿ ಪ್ರಕಾರ ತಕ್ಷಣಕ್ಕೆ ಯಾವುದೇ ಆತಂಕ ಬೇಡ ಅಂತಲೇ ಹೇಳುತ್ತಿದ್ದಾರೆ. ಅಕಸ್ಮಾತ್ ಕೋವಿಡ್ ಹೆಚ್ಚಳ ಕಂಡು ಬಂದರೆ ಶಾಲೆಗಳನ್ನು ಕ್ಲೋಸ್ ಮಾಡೋದಕ್ಕೂ ಕೂಡ ನಾವು ಸಿದ್ದರಿದ್ದೇವೆ. ಯಾವುದೇ ರೀತಿಯ ಆತಂಕ ಪೋಷಕರಿಗೆ ಬೇಡ. ಇವತ್ತು ಅಧಿಕಾರಿಗಳ ಜೊತೆ ಸಭೆ ಮಾಡಿ ಎಸ್‌ಒಪಿ ಮತ್ತಷ್ಟು ಕಠಿಣ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದ ಸಚಿವರು ವಸತಿ ಶಾಲೆಗಳಲ್ಲಿ ಕೋವಿಡ್ ಹೆಚ್ಚಳ :ವಸತಿ ಹಾಗೂ ನವೋದಯ ಶಾಲೆಗಳಲ್ಲಿ ಸೋಂಕು ಕಂಡು ಬಂದಿದೆ. 1 ರಿಂದ 10ನೇ ತರಗತಿಗಳ ಸರ್ಕಾರಿ ಶಾಲೆಗಳಲ್ಲಿ ಸೋಂಕಿಲ್ಲ. ಹಾಗಾಗಿ, ವಸತಿ, ನವೋದಯ ಶಾಲೆಗಳಲ್ಲಿ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಮಕ್ಕಳಿಗೆ ತೊಂದರೆ ಆಗಿಲ್ಲ, ಚಿಕಿತ್ಸೆ ಕೊಡಲಾಗಿದೆ. ಇಬ್ಬರು ಶಿಕ್ಷಕರಿಗೆ ಸೋಂಕು ತಗುಲಿದೆ. ಯಾವುದೇ ಸಮಸ್ಯೆ, ಆತಂಕ ಇಲ್ಲ ಎಂದರು.
ಅಧಿಕಾರಿಗಳ ಜೊತೆ ಚರ್ಚೆ : ಇಂದು ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಇರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ. ನಾನು ನಾಳೆ, ನಾಡಿದ್ದು, ಸೋಂಕಿತ ವಸತಿ, ನವೋದಯ ಶಾಲೆಗಳಿಗೆ ಭೇಟಿ ನೀಡುತ್ತೇನೆ. ವಸತಿ ಶಾಲೆಗಳಲ್ಲಿ ಎಸ್‌ಒಪಿ ಪಾಲನೆ ಆಗ್ತಿದೆಯಾ ಇಲ್ಲವೇ ಎಂಬುದರ ಬಗ್ಗೆ ಸ್ಚತಃ ಡಿಸಿಗಳೇ ಚೆಕ್ ಮಾಡುವುದಕ್ಕೆ ಹೇಳಿದ್ದೇನೆ ಎಂದರು.
ಮಕ್ಕಳಿಗೆ ಲಸಿಕೆ : ಪರೀಕ್ಷೆಗಳಲ್ಲಿ ಹೆಚ್ಚು ಸಾಮಾಜಿಕ ಅಂತರ ನಿಯಮಗಳ ಪಾಲನೆ ಆಗುತ್ತದೆ. ಫೆಬ್ರವರಿ ಅಂತ್ಯದ ವೇಳೆಗೆ ಸ್ವಲ್ಪ ಕೋವಿಡ್ ಹೆಚ್ಚಾಗಬಹುದು. ಆದರೆ, ಆ ವೇಳೆಗೆ ಮಕ್ಕಳಿಗೇ ಲಸಿಕೆ ಬರುವ ಸಾಧ್ಯತೆ ನಿರೀಕ್ಷೆ ಹೆಚ್ಚಿದೆ. ಹೀಗಾಗಿ, ಪ್ರತಿ ಕ್ಷಣವೂ ಸರ್ಕಾರ ಗಮನಿಸುತ್ತಿದೆ ಎಂದು ಹೇಳಿದರು.