ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಯಾವ ರೀತಿ ಕೆಲಸ ಮಾಡಬೇಕು ಎಂದು ಪ್ರಾಥಮಿಕ ಚಿಂತನೆ ನಡೆಯಲಿದೆ.
ಸರಣಿ ಸಭೆಗಳ ನಂತರ ಯಾವ ರೀತಿಯಾಗಿ ಯೋಜನಾ ಬದ್ಧವಾಗಿ ಅಜೆಂಡಾ ಬೇಕು ಎನ್ನುವ ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಹಾನಗರದ ಯೋಜನೆ ರೂಪಿಸುವ ಮೂಲಕ ಬಿಬಿಎಂಪಿ ಚುನಾವಣೆ ಗೆಲ್ಲಲು ಆಡಳಿತಾರೂಢ ಬಿಜೆಪಿ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರದ ಯೋಜನೆ ರೂಪಿಸುತ್ತಿದ್ದಾರೆ.
ಬೆಂಗಳೂರು ಅಜೆಂಡಾ ಮೂಲಕ ಯೋಜನೆ ತಯಾರಿಸಿ ಮಾದರಿ ನಗರ ಮಾಡಲು ಸಿಎಂ ಕಸರತ್ತು ನಡೆಸುತ್ತಿದ್ದಾರೆ. ಉದ್ಯಮಿಗಳು ಹಾಗೂ ಪರಿಣಿತರ ಸರಣಿ ಸಭೆಗೆ ಮುಂದಾಗಿದ್ದಾರೆ.
ಬೆಂಗಳೂರು ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿರುವುದು.. ಇಂದು ಸಿಎಂ ಬೊಮ್ಮಾಯಿ ಮೊದಲ ಸಭೆಯನ್ನು ಉದ್ಯಮಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ನಿವಾಸದಲ್ಲಿ ಆಯೋಜನೆ ಮಾಡಿದ್ದಾರೆ. ಉದ್ಯಮಿಗಳಿಂದ ಸಿಎಂ ಸಲಹೆ ಪಡೆಯಲಿದ್ದಾರೆ.
ಸಭೆಯಲ್ಲಿ ಭಾಗಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚಿಸಲು ನನ್ನನ್ನು ಕರೆದಿದ್ದಾರೆ. ಬೆಂಗಳೂರಿನ ಆರ್ಥಿಕತೆ ಮತ್ತು ಅಭಿವೃದ್ಧಿ ಬಗ್ಗೆ ಯಾವ ರೀತಿ ಕೆಲಸ ಮಾಡಬೇಕು ಎಂದು ಇಂದು ಪ್ರಾಥಮಿಕ ಚಿಂತನೆ ನಡೆಸಲಾಗುವುದು.
ಇದರ ಬಗ್ಗೆ ಇನ್ನಷ್ಟು ಚರ್ಚೆ ಅವಶ್ಯಕತೆ ಇದೆ. ಬೇರೆ ಬೇರೆ ರಂಗದವರ ಜೊತೆಯೂ ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇನೆ. ಬಳಿಕ ಸಚಿವ ಸಂಪುಟದ ಸದಸ್ಯರ ಜೊತೆಯೂ ಚರ್ಚೆ ಮಾಡುತ್ತೇನೆ. ಶಾಸನ ಸಭೆಯಲ್ಲಿ ನಿರ್ಧಾರ ಇಟ್ಟು ಅಂತಿಮ ಮಾಡುತ್ತೇವೆ ಎಂದರು.
ಇದನ್ನೂ ಓದಿ:'Ride for Appu' ಬೈಕ್ ಮೆರವಣಿಗೆಗೆ ಚಾಲನೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ
ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಆಯೋಜಿಸಿರುವ ಸರಣಿ ಸಭೆಯಲ್ಲಿ ಇದೊಂದು ಭಾಗ. ಇದು ಈ ಸರಣಿಯ ಮೊದಲನೇ ಸಭೆಯಾಗಿದೆ. ನಮ್ಮ ಅಧಿಕಾರಿಗಳ ಹಾಗೂ ಬೆಂಗಳೂರು ಶಾಸಕರ ಜೊತೆಯಲ್ಲೂ ಸಭೆ ಮಾಡುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.