ಬೆಂಗಳೂರು:ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಮೈಸೂರು ರಸ್ತೆಯ ಡಾ.ಮುತ್ತುರಾಜ್ ಜಂಕ್ಷನ್ ಬಳಿಯ ಸಿಗ್ನಲ್ ಫ್ರೀ ಕಾರಿಡಾರ್ ಕೆಳ ಸೇತುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ನಾಯಂಡಹಳ್ಳಿ ಜಂಕ್ಷನ್ನಿಂದ ಜೆ.ಡಿ.ಮರ ಹಾಗೂ ಸಿಲ್ಕ್ ಬೋಡ್೯ ಜಂಕ್ಷನ್ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಇದರ ಒಂದು ಭಾಗವಾದ ಡಾ.ಮುತ್ತುರಾಜ್ ಜಂಕ್ಷನ್ ಬಳಿ ರೂ.17.82 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
277 ಮೀಟರ್ ಉದ್ದದ ಕೆಳ ಕಾಮಗಾರಿ ವಿಳಂಬವಾಗಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದರು. ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿಗಳು, ಜಂಕ್ಷನ್ ಬಳಿ ಬೆಸ್ಕಾಂನಿಂದ ಯುಜಿ ಕೇಬಲ್ ಅಳವಡಿಕೆ ವಿಳಂಬವಾಯ್ತು ಅಲ್ಲದೆ ಜಲಮಂಡಳಿ ಕಾಮಗಾರಿಯಿಂದಲೂ ವಿಳಂಬವಾಯ್ತು. ಅಲ್ಲದೆ, ಕಾಮಗಾರಿ ಸ್ಥಳದಲ್ಲಿ ಬೃಹತ್ ಬಂಡೆ ಅಡ್ಡ ಬಂದು, ನಿವಾಸಿಗಳು ಅದನ್ನು ಬ್ಲಾಸ್ಟ್ ಮಾಡಲು ಬಿಡಲಿಲ್ಲ. ಅದಕ್ಕಾಗಿ ಬಂಡೆ ತೆರವುಗೊಳಿಸಿ ಕಾಮಗಾರಿಯನ್ನು ಮುಂದುವರೆಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಕಾಮಗಾರಿಯ ವಿಳಂಬವಾಗಿದೆ ಎಂದರು.