ಬೆಂಗಳೂರು:ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಕೇರಳದಿಂದ ನಗರಕ್ಕೆ ಬಂದು ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ದೆಯನ್ನು ಕೊಲೆ ಮಾಡಿದ್ದ ಆರೋಪಿ ಹಾಗೂ ಆತನ ಸಹಚರ ಸೇರಿದಂತೆ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಅನ್ಸಾರಿ ಹಾಗೂ ಸ್ಥಳೀಯ ನಿವಾಸಿ ಪ್ರದೀಪ್ ಬಂಧಿತರು. ಅನ್ಸಾರಿ ವಿರುದ್ಧ ಸರಗಳ್ಳತನ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತ ಪೊಲೀಸರ ಭೀತಿಯಿಂದ ತಪ್ಪಿಸಿಕೊಳ್ಳಲು ನಗರದಲ್ಲಿ ವಾಸ್ತವ್ಯ ಹೂಡಿದ್ದಾನೆ. ಮತ್ತೆ ಹಳೆ ಕಾಯಕವನ್ನೇ ಮುಂದುವರಿಸಿದ್ದ ಈತ ಬಾಡಿಗೆ ಮನೆ ಕೇಳುವ ನೆಪದಲ್ಲಿ ಒಂಟಿ ಮಹಿಳೆಯನ್ನು ಗುರಿಯಾಗಿಸಿ ಸರಗಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದ.
ಇದೇ ರೀತಿ ಬೊಮ್ಮನಹಳ್ಳಿಯ ಠಾಣಾ ವ್ಯಾಪ್ತಿಯೊಂದರಲ್ಲಿ 65 ವರ್ಷದ ನಿರ್ಮಲಾ ಮೇರಿ ಎಂಬುವರ ಮನೆಗೆ ಬಾಡಿಗೆ ಮನೆ ಕೇಳುವ ನೆಪದಲ್ಲಿ ಆಕೆಯ ಸರ ಕಸಿಯಲು ಪ್ರಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದ ಮೇರಿ ಜೋರಾಗಿ ಕೂಗಿಕೊಂಡಿದ್ದರು. ಹೀಗೆ ಕಿರುಚಾಡುತ್ತಿದ್ದಂತೆ ಕಬ್ಬಿಣದ ರಾಡ್ನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ 50 ಗ್ರಾಂ ಚಿನ್ನಾಭರಣ ಕಸಿದು ಆರೋಪಿ ಕಾಲ್ಕಿತ್ತಿದ್ದ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.