ಬೆಂಗಳೂರು:ಬನಶಂಕರಿಯ 2ನೇ ಹಂತದ ಶ್ರೀನಿವಾಸನಗರದ ವ್ಯಕ್ತಿಯೊಬ್ಬರು ಕುಡಿದ ಮತ್ತಿನಲ್ಲಿ ಆಯತಪ್ಪಿ ರಾಜಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ.
ಶ್ರೀನಿವಾಸನಗರದ ನಿವಾಸಿ ಶ್ಯಾಮ್ ಪ್ರಸಾದ್ ಮೃತ ವ್ಯಕ್ತಿ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಅವಿವಾಹಿತರಾಗಿದ್ದ ಪ್ರಸಾದ್, ಪೋಷಕರ ಜತೆ ಶ್ರೀನಿವಾಸನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರು. ಅವರು ವಾಸವಿದ್ದ ಮನೆಯಿಂದ 100 ಮೀಟರ್ ದೂರದಲ್ಲಿಯೇ ರಾಜಕಾಲುವೆ ಇದೆ.
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಶನಿವಾರ ಬಾರ್ನಲ್ಲಿ ಕುಡಿದು ಮನೆಗೆ ಬರುವಾಗ ಕಾಲು ಜಾರಿ ರಾಜಕಾಲುವೆಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.