ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಆಕರ್ಷಣೆ ಎಂದರೆ ಶಾಪಿಂಗ್ ಮಾಲ್‌ಗಳು. ಆರಂಭದಲ್ಲಿ ಒಂದೆರಡು ಸಂಖ್ಯೆಯಲ್ಲಿದ್ದ ಮಾಲ್‌ಗಳು ಈಗ ಹತ್ತಾರು ಸಂಖ್ಯೆಯಲ್ಲಿ ತಲೆ ಎತ್ತಿದ್ದು ವೀಕೆಂಡ್ನಲ್ಲಿ ಲಕ್ಷಾಂತರ ರೂಪಾಯಿ ವ್ಯಾಪಾರ-ವಹಿವಾಟು ನಡೆಸುತ್ತವೆ. ಆದರೆ ಹೀಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಮಾಲ್‌ಗಳು ಬಿಬಿಎಂಪಿಗೆ ಮಾತ್ರ ಕೋಟ್ಯಂತರ ರೂಪಾಯಿ ತೆರಿಗೆ ಉಳಿಸಿಕೊಂಡಿವೆ.
ಮಾಲ್‌ಗಳು ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡು ಕಳ್ಳಾಟ ಆಡುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ನಗರದ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಈಗಾಗಲೇ ನಾಲ್ಕು ಬಾರಿ ಬೀಗ ಹಾಕಲಾಗಿದೆ. ಆದರೆ ಇದರಿಂದ ಯಾವ ಮಾಲ್ಗಳೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಇನ್ನೂ ನಗರದ ನೂರಾರು ಮಾಲ್‌ಗಳು ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸಬೇಕಿದೆ.
ನಗರದ ಪ್ರಮುಖ 44 ಮಾಲ್ಗಳ ಪೈಕಿ 7 ಪ್ರತಿಷ್ಠಿತ ಮಾಲ್‌ಗಳು ತೆರಿಗೆ ಬಾಕಿ ಉಳಿಸಿಕೊಂಡಿವೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಬೆಂಗಳೂರಿನ ಪ್ರತಿಷ್ಠಿತ ಮಾಲ್ಗಳಿಂದ 46 ಕೋಟಿ, 70 ಲಕ್ಷ ತೆರಿಗೆ ಬಾಕಿ ಇದೆ. ಹೀಗಾಗಿ ಸದ್ಯದಲ್ಲೇ ಕಾನೂನು ಕ್ರಮದ ಮೂಲಕ ತೆರಿಗೆ ವಸೂಲಿಗೆ ಸಿದ್ಧತೆ ನಡೆಯುತ್ತಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ಡಾ.ದೀಪಕ್ ತಿಳಿಸಿದರು.