ಕರ್ನಾಟಕ

karnataka

ETV Bharat / city

2ನೇ ಇನ್ನಿಂಗ್ಸ್ ಆರಂಭಿಸಿದ ಸಿಎಂ BSY ಪ್ರಮುಖ ಯೋಜನೆಗಳು ಇಂತಿವೆ!

ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ. ಎಸ್​. ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗಾಗಿ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರು. ಪ್ರತಿ ಜಿಲ್ಲೆಯಲ್ಲಿಯೂ ವಿಮಾನ ನಿಲ್ದಾಣ, ಬೆಂಗಳೂರು ಅಭಿವೃದ್ಧಿಗೆ ಮಿಷನ್ ಬೆಂಗಳೂರು ಯೋಜನೆ, ರೈತರಿಗೆ ಕಿಸಾನ್ ಸಮ್ಮಾನ್, ಹೈದರಾಬಾದ್-ಕರ್ನಾಟಕ ಬದಲಿಗೆ ಕಲ್ಯಾಣ ಕರ್ನಾಟಕ ನಾಮಕರಣ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಹೀಗೆ ಹಲವಾರು ಯೋಜನೆಗಳನ್ನು ನಾವು ಕಾಣಬಹುದಾಗಿದೆ.

By

Published : Jul 24, 2021, 5:54 PM IST

major-projects-implemented-by-cm-yeddyurappa
ಸಿಎಂ ಬಿಎಸ್​ವೈ

ಬೆಂಗಳೂರು: ಹಲವಾರು ಸವಾಲುಗಳೊಂದಿಗೆ ಮುಖ್ಯಮಂತ್ರಿಯಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಬಿ.ಎಸ್.ಯಡಿಯೂರಪ್ಪ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಬಿ.ಎಸ್. ಯಡಿಯೂರಪ್ಪ ಅವರು ಹೊಸ ಪರ್ವ ಆರಂಭಿಸಿದರು.

ಪ್ರತಿ ಜಿಲ್ಲೆಯಲ್ಲಿಯೂ ವಿಮಾನ ನಿಲ್ದಾಣದ ಗುರಿ ಹೊಂದಿದ್ದು, ಬೆಂಗಳೂರು ಅಭಿವೃದ್ಧಿಗೆ ಮಿಷನ್ ಬೆಂಗಳೂರು, ರೈತರಿಗೆ ಕಿಸಾನ್ ಸಮ್ಮಾನ್, ಹೈದರಾಬಾದ್ - ಕರ್ನಾಟಕ ಬದಲಿಗೆ ಕಲ್ಯಾಣ ಕರ್ನಾಟಕ ನಾಮಕರಣ, ಯಾರು ಎಲ್ಲಿ ಬೇಕಾದರೂ ಕೃಷಿ ಮಾಡಲು ಅನುಕೂಲವಾಗಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.

ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಸಚಿವ ಸಂಪುಟ ಸಭೆಯಲ್ಲಿ ರೈತರು ಮತ್ತು ನೇಕಾರರಿಗೆ ಆದ್ಯತೆ ನೀಡುವ ಮೂಲಕ ರೈತ ಮತ್ತು ಬಡವರ ಪರ ಸರ್ಕಾರ ಎಂಬ ಸಂದೇಶವನ್ನು ರವಾನಿಸಿದರು. ಮೊದಲ ಸಚಿವ ಸಂಪುಟ ಸಭೆಯಲ್ಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸುವ ತೀರ್ಮಾನ ಕೈಗೊಂಡರು.

ಈ ಯೋಜನೆಯಡಿ ಬಡ ರೈತರಿಗೆ ಕೇಂದ್ರ ಸರ್ಕಾರ ನೀಡುವ ಮೊತ್ತದ ಜತೆಗೆ ರಾಜ್ಯ ಸರ್ಕಾರದಿಂದಲೂ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂ. ನೀಡುವ ನಿರ್ಣಯ ಕೈಗೊಂಡರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಬಡ ರೈತರಿಗೆ ಕೇಂದ್ರ ಸರ್ಕಾರ ಮೂರು ಕಂತುಗಳಲ್ಲಿ ಆರು ಸಾವಿರ ರೂ. ನೀಡಲಾಗುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರದಿಂದ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂ. ನೀಡಲು ತೀರ್ಮಾನಿಸಲಾಗಿದೆ. ಇದೇ ವೇಳೆ, ನೇಕಾರರ ಸಮಸ್ಯೆಗೆ ಸ್ಪಂದಿಸಿ 100 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದರು.

ಕಲ್ಯಾಣ ಕರ್ನಾಟಕ ಸ್ಥಾಪನೆ:ಹೈದರಾಬಾದ್-ಕರ್ನಾಟಕದ ಜಿಲ್ಲೆಗಳು ಹೈದರಾಬಾದ್‌ನಿಂದ ವಿಮೋಚನೆಗೊಂಡಿದ್ದರೂ ಅದೇ ಹೆಸರಿನಿಂದ ಮುಕ್ತಿ ಸಿಕ್ಕಿರಲಿಲ್ಲ. ದಶಕಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಜಯ ತಂದುಕೊಟ್ಟ ಬಿಎಸ್​ವೈ, ಕಲ್ಯಾಣ ಕರ್ನಾಟಕ ಎಂದು ಹೆಸರಿಡುವ ತೀರ್ಮಾನ ಕೈಗೊಳ್ಳುವ ಮೂಲಕ ಅದನ್ನು ಕಾರ್ಯಗತಗೊಳಿಸಿದರು.

ಸರ್ಕಾರವು ಆ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಿ, ಸರ್ಕಾರಿ ಕಡತಗಳಲ್ಲಿಯೂ ಕಲ್ಯಾಣ ಕರ್ನಾಟಕ ಎಂಬುದಾಗಿ ನಮೂದಾಗುವಂತೆ ಕ್ರಮಕೈಗೊಳ್ಳಲಾಗಿದೆ. ಈ ಮೂಲಕ ಬೀದರ್, ಕೊಪ್ಪಳ, ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಕಲ್ಯಾಣ ಕರ್ನಾಟಕ ಎಂದು ಕರೆಯಲಾಗುತ್ತದೆ.

ಕೃಷಿ ಕ್ಷೇತ್ರದಲ್ಲಿ ಯುವಕರಿಗೆ ಅನುಕೂಲ: ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತ ಯುವಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೊಳಿಸಿದ ಹೆಗ್ಗಳಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸಲ್ಲುತ್ತದೆ. ಈ ಕಾಯ್ದೆಯಿಂದ ಜಾರಿಯಿಂದ ಕೃಷಿಯೇತರರು ಕೃಷಿ ಭೂಮಿ ಖರೀದಿಸಲು ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ.

ಕೃಷಿ ಜಮೀನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಿ ಯಾರು ಬೇಕಾದರೂ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಕೃಷಿ ಕಾರ್ಯ ಕೈಗೊಳ್ಳಬಹುದು. ಭೂ ಸುಧಾರಣೆ ಕಾಯ್ದೆಯಡಿ ಜಾರಿಯಲ್ಲಿರುವ 63 ಎ, 79ಎ, ಬಿ ಕಾನೂನುಗಳನ್ನು ರದ್ದುಗೊಳಿಸಿ ಹೊಸ ಕಾನೂನುಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಇತ್ತೀಚೆಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವವರು ಕೃಷಿ ಚಟುವಟಿಕೆ ಕಡೆ ಗಮನಹರಿಸುತ್ತಿದ್ದಾರೆ.

ವೈಮಾನಿಕ ಅಭಿವೃದ್ಧಿ:ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ನಿಯಮಗಳನ್ನು ಸರಳೀಕರಣಗೊಳಿಸಿ ಕ್ರಾಂತಿಕಾರಕ ಬದಲಾವಣೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೆಗಳ (ಸೌಲಭ್ಯ) ಕಾಯ್ದೆ 2002 ’ಕ್ಕೆ ತಿದ್ದುಪಡಿ ಮಾಡಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಆಂತರಿಕ ವಿಮಾನಯಾನ ವ್ಯವಸ್ಥೆ ಕಲ್ಪಿಸುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿಯಂತಹ ಪ್ರದೇಶಗಳು ಮಾತ್ರ ಅಭಿವೃದ್ಧಿಯಾದರೆ ಸಾಲದು, ಇಡೀ ರಾಜ್ಯವೇ ಅಭಿವೃದ್ಧಿಯಾಗಬೇಕು. ಆಗ ಮಾತ್ರ ಸರ್ವಾಂಗೀಣ ಅಭಿವೃದ್ಧಿಯಾದಂತೆ ಎಂಬ ಪರಿಕಲ್ಪನೆಯಡಿ ಯಡಿಯೂರಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ.

ವೈಮಾನಿಕ ವ್ಯವಸ್ಥೆ ಸಮರ್ಪಕವಾಗಿದ್ದರೆ ಮಾತ್ರ ಉದ್ಯಮಿದಾರರು ಹೂಡಿಕೆ ಮಾಡಲು ಮುಂದಾಗಲಿದ್ದಾರೆ ಎಂಬುದನ್ನು ಅರಿತ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ವಿಮಾನ ನಿಲ್ದಾಣ ಸ್ಥಾಪನೆ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆ. ಈಗಾಗಲೇ ಏಳು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದಂತೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ.

ವಿಜಯಪುರ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರವು ಅನುಮೋದನೆ ನೀಡಿದೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಚಾಲನೆ ನೀಡಿದ್ದಾರೆ. ಇನ್ನು ಐತಿಹಾಸಿಕ ಸ್ಥಳವಾಗಿರುವ ವಿಜಯಪುರದಲ್ಲಿಯೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ.

ದಾವೋಸ್​​​ಗೆ ಭೇಟಿ ನೀಡಿದ 2ನೇ ಸಿಎಂ ಹೆಗ್ಗಳಿಕೆ :ಯಡಿಯೂರಪ್ಪ ದಾವೋಸ್‌ಗೆ ಭೇಟಿ ಕೊಟ್ಟ ರಾಜ್ಯದ ಎರಡನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ರಾಜ್ಯದಿಂದ ಭಾಗವಹಿಸಿದ್ದರು. ಈ ಮೊದಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹೋಗಿ ಬಂದಿದ್ದರು. ಬಳಿಕ ಬೇರಾವ ಮುಖ್ಯಮಂತ್ರಿಗಳು ಸಮ್ಮೇಳನದಲ್ಲಿ ಭಾಗವಹಿಸಿರಲಿಲ್ಲ.


ಸಮಾವೇಶದಲ್ಲಿ ವಿವಿಧ ಹೂಡಿಕೆದಾರರು ಮತ್ತು ಉದ್ಯಮಿಗಳ ಜತೆ ಚರ್ಚೆ ನಡೆಸಿದರು. ಸ್ವಿಸ್ ಮೂಲಕ 2000 ವ್ಯಾಟ್ ಕಂಪನಿಯ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದ ವೇಳೆ, ರೈತರ ಆತ್ಮಹತ್ಯೆಯ ಪ್ರವೃತ್ತಿಯನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ಆಧಾರಿತ ಆರ್ಥಿಕತೆಯನ್ನು ಸುಧಾರಿಸುವ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು.

ಬಹರೇನ್‌ನ ಎಕನಾಮಿಕ್ ಡೆವಲಪ್‌ಮೆಂಟ್ ಬೋರ್ಡ್‌ನೊಂದಿಗೆ ಫಿನ್‌ಟೆಕ್, ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಸೆಕ್ಯೂರಿಟಿ ವಿಷಯಗಳಲ್ಲಿ ಸಹಯೋಗ ಮತ್ತು ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಉದ್ಯಮಿಗಳ ಮತ್ತು ಹೂಡಿಕೆದಾರರ ಜತೆ ಚರ್ಚಿಸಿದರು. ಇನ್ನು ರಾಜ್ಯದಲ್ಲಿ ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿ ಮಹತ್ವದ ಹಣಕಾಸು ಸಚಿವರಾಗಿ ಬಿ.ಎಸ್. ಯಡಿಯೂರಪ್ಪ ಅವರು ಜಾರಿಗೆ ತಂದ ರೈತ ಪರ ತಂದ ಹತ್ತು ಹಲವು ಕಾರ್ಯಕ್ರಮಗಳು ಜನಮನ ಗೆದ್ದಿದ್ದವು.

ಇಷ್ಟಾಗಿಯೂ ರಾಜಕೀಯ ಸ್ಥಿತ್ಯಂತರದ ಪರಿಣಾಮ ಸಮ್ಮಿಶ್ರ ಸರ್ಕಾರ ಕೊನೆಗೊಂಡು, ಹೊಸದಾಗಿ ಜನಾದೇಶ ಪಡೆಯುವಂತಹ ಸನ್ನಿವೇಶ ನಿರ್ಮಾಣವಾಯಿತು. ಹಣಕಾಸು ಸಚಿವರಾಗಿ ನಡೆಸಿದ ಆಡಳಿತದ ಒಟ್ಟಾರೆ ಫಲಶ್ರುತಿಯಾಗಿ ಬಿಜೆಪಿ 2008 ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು 2011 ರವರೆಗೆ ರಾಜ್ಯದ ಒಟ್ಟಾರೆ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು.

ಮೊದಲ ಬಾರಿಗೆ ಕೃಷಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ:ಪ್ರಮುಖವಾಗಿ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡಿದರು. ದೇಶದಲ್ಲೇ ಮೊದಲ ಬಾರಿಗೆ ಕೃಷಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ನಡೆಸಿದರು. ಖಾಸಗಿ ಸಹಭಾಗಿತ್ವದಲ್ಲಿ ‘ಆರೋಗ್ಯ ಕವಚ’ ಆ್ಯಂಬುಲೆನ್ಸ್ ಸೇವೆ ಆರಂಭ ಮಾಡಿದರು. ಸಹಕಾರಿ ಸಂಸ್ಥೆಯಿಂದ ಪಡೆವ 3 ಲಕ್ಷ ರೂ.ವರೆಗಿನ ಬೆಳೆಸಾಲದ ಬಡ್ಡಿ ಶೇ.1 ಕ್ಕೆ ಇಳಿಸಿದ್ದು, ರಾಜ್ಯದ ಮಠ - ಮಂದಿರಗಳು, ಧಾರ್ಮಿಕ ಸಂಸ್ಥೆಗಳಿಗೆ ಭಾರಿ ಅನುದಾನ ನೀಡಿದ ಕೀರ್ತಿ ಬಿಎಸ್​​​ವೈ ಅವರಿಗೆ ಸಲ್ಲುತ್ತದೆ.

ಭಾಗ್ಯಲಕ್ಷ್ಮಿ ಯೋಜನೆ ಜಾರಿ :ಕ್ರಾಂತಿಕಾರಕವಾದ ‘ಭಾಗ್ಯಲಕ್ಷ್ಮಿ’ ಯೋಜನೆ ಜಾರಿಗೆ ತಂದರು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ಈ ಯೋಜನೆ ಜಾರಿಗೆ ತಂದರು. ಈ ಯೋಜನೆಯಡಿ 10.18 ಲಕ್ಷ ಬಾಂಡ್‌ಗಳನ್ನು ನೀಡಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್:ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಜಾರಿಗೆ ತಂದ ಪರಿಣಾಮ ನಾಡಿನ ಲಕ್ಷಾಂತರ ಮಕ್ಕಳು ಶಾಲೆಗಳತ್ತ ಮುಖ ಮಾಡ ತೊಡಗಿದರು. ಆರೋಗ್ಯ ಕವಚ ಯೋಜನೆಯಡಿ ತುರ್ತು ಸೇವೆಯ ವಾಹನಗಳನ್ನು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಯಿತು. ಸಹಕಾರಿ ಸಂಸ್ಥೆಗಳ ಮೂಲಕ ಪಡೆಯುವ 3 ಲಕ್ಷ ರೂ.ವರೆಗಿನ ಬೆಳೆ ಸಾಲದ ಮೇಲಿನ ಬಡ್ಡಿ ಪ್ರಮಾಣವನ್ನು ಶೇ. 3 ರಿಂದ ಶೇ.1ಕ್ಕೆ ಇಳಿಸಿ ರೈತರಿಗೆ ಸುಲಭವಾಗಿ ಸಾಲ ದೊರಕಿಸುವ ವ್ಯವಸ್ಥೆ ಮಾಡಿಕೊಟ್ಟರು.

ABOUT THE AUTHOR

...view details