ಬೆಂಗಳೂರು: ಅಪರೂಪದ ಅನುವಂಶೀಯ ಕಾಯಿಲೆ 'ಲೈಸೋಸೋಮಲ್' ನಿಂದ ಬಳಲುತ್ತಿರುವ ಮಕ್ಕಳಿಗೆ ಎರಡು ಖಾಸಗಿ ಔಷಧಿ ಸಂಸ್ಥೆಗಳು ಪ್ರತ್ಯೇಕವಾಗಿ ನೀಡುತ್ತಿರುವ ಉಚಿತ ಚಿಕಿತ್ಸಾ ಸೌಲಭ್ಯ (ಥೆರಪಿ)ಗಳನ್ನು ಕ್ರೂಢೀಕರಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಸೂಚಿಸಿದೆ.
ಈ ಕುರಿತು ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ ಸೊಸೈಟಿ ಆಫ್ ಇಂಡಿಯಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಖಾಸಗಿ ಔಷಧ ಪೂರೈಕೆದಾರ ಕಂಪೆನಿಗಳ ಪರ ವಕೀಲರು ವಾದಿಸಿ, ಇಂದಿರಾಗಾಂಧಿ ಮಕ್ಕಳ ಆರೋಗ ಸಂಸ್ಥೆ ಸೂಚಿಸುವ ಆಯ್ದ ಮಕ್ಕಳಿಗೆ 2021ರ ಮಾ.31 ರವರೆಗೆ ಕೆಲವು ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ನೀಡಲಿದೆ ಎಂದು ತಿಳಿಸಿದರು.
ಮತ್ತೊಂದು ಸಂಸ್ಥೆಯ ಪರ ವಕೀಲರು ಮಾಹಿತಿ ನೀಡಿ, ಕರ್ನಾಟಕದ 14 ಮಕ್ಕಳು ಸೇರಿ ದೇಶದಲ್ಲಿ 130 ಮಕ್ಕಳಿಗೆ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಈಗ ಇಂದಿರಾಗಾಂಧಿ ಮಕ್ಕಳ ಆರೊಗ್ಯ ಸಂಸ್ಥೆ ಸೂಚಿಸುವ ಮೂವರು ಮಕ್ಕಳಿಗೆ 6 ತಿಂಗಳು ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಎರಡೂ ಔಷಧ ಪೂರೈಕೆದಾರ ಕಂಪೆನಿಗಳು ಉಚಿತವಾಗಿ ಒದಗಿಸಲು ಉದ್ದೇಶಿಸಿರುವ ಚಿಕಿತ್ಸಾ ಸೌಲಭ್ಯಗಳನ್ನು ಕ್ರೂಢೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರೆ, ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.