ಬೆಂಗಳೂರು: ಕೊರೊನಾ ಕಾರಣದಿಂದ ಶಾಲಾ-ಕಾಲೇಜುಗಳನ್ನು ಇನ್ನೂ ಆರಂಭಿಸಿಲ್ಲ. ಹೀಗಾಗಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ಇಟ್ಟುಕೊಂಡು ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಜಾರಿ ತರಲಾಗಿದೆ. ಬಡವರು ಮೊಬೈಲ್ ಖರೀದಿಸಲು ಸಾಧ್ಯವಿಲ್ಲದ ಕಾರಣ ಗ್ರಾಮೀಣ ಮಕ್ಕಳು ತರಗತಿಗಳಿಂದ ದೂರವಿದ್ದರೆ, ಇನ್ನೂ ಕೆಲವರಿಗೆ ನೆಟ್ವರ್ಕ್ ಸಮಸ್ಯೆ. ಆದರೆ, ಮೊಬೈಲ್ ಮತ್ತು ಲ್ಯಾಪ್ಟ್ಯಾಪ್ ಇದ್ದವರು ಮಹಿಳಾ ಶಿಕ್ಷಕಿಯರ ಮೊಬೈಲ್ ನಂಬರ್‌ಗಳನ್ನು ಪಡೆದು ಸಿಕ್ಕ ಸಿಕ್ಕಾಗ ಕರೆ ಮಾಡಿ ತೊಂದರೆ ನೀಡುತ್ತಿದ್ದಾರೆ ಎನ್ನಲಾಗ್ತಿದೆ.
ಮೊದಲು ಶೇ.20 ರಿಂದ 30ರಷ್ಟಿದ್ದ ತರಗತಿಗಳು, ಇದೀಗ ಫುಲ್ ಟೈಂ ಆಗಿವೆ. ಏನೋ ಪಾಪ ಎಂದು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸರ್ಕಾರ ಚಿಂತನೆ ನಡೆಸಿದರೆ, ಮಕ್ಕಳು ಆನ್‌ಲೈನ್ ಕ್ಲಾಸ್ಗಳಲ್ಲಿ ಶಿಕ್ಷಕರ ವೈಯಕ್ತಿಕ ಮೊಬೈಲ್ ನಂಬರ್‌ಗಳನ್ನು ಪಡೆದು ಅನಗತ್ಯ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ವಿದ್ಯಾರ್ಥಿಗಳು ಮನೆಯಲ್ಲಿಯೇ ಸ್ಮಾರ್ಟ್ಫೋನ್, ಟ್ಯಾಬ್, ಲ್ಯಾಪ್ಟಾಪ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಅಂದ ಹಾಗೆ ಈ ಕ್ಲಾಸ್ಗಾಗಿ ಬೇರೆ ಬೇರೆ ಆ್ಯಪ್ನಲ್ಲಿ ಕನೆಕ್ಟ್ ಮಾಡಲಾಗುತ್ತೆ. ಆಗ ಶಿಕ್ಷಕರ ಮೊಬೈಲ್ ನಂಬರ್, ಇ-ಮೇಲ್ ಐಡಿ ನೀಡಲಾಗುತ್ತೆ. ಈ ವೇಳೆ ವಿದ್ಯಾರ್ಥಿನಿಯರ ಮತ್ತು ಶಿಕ್ಷಕಿಯರ ನಂಬರ್ಗಳನ್ನ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಾರೆ. ಅದನ್ನೇ ದುರುಪಯೋಗ ಮಾಡಿಕೊಂಡು ಕೆಲವರು ಅವರಿಗೆ ಅನಗತ್ಯ ಸಂದೇಶ, ಕರೆ ಮಾಡುವುದು ಮತ್ತು ಬೆದರಿಕೆ ಕರೆಗಳನ್ನು ಮಾಡಲಾಗುತ್ತದೆ. ಅದಲ್ಲದೇ, ಸರ್ವರ್ ಹ್ಯಾಕ್ ಮಾಡುವುದು ಬಳಿಕ ಆಡಳಿತ ಮಂಡಳಿಗೆ ಹಣಕ್ಕಾಗಿ ಪೀಡಿಸುವುದು ಎಲ್ಲವೂ ಆಗುವ ಸಾಧ್ಯತೆಗಳಿವೆ.
ಆನ್‌ಲೈನ್ ತರಗತಿಗಳಿಂದ ಸಮಸ್ಯೆ ಎದುರಿಸಲಿರುವ ಶಿಕ್ಷಕಿಯರು ಹುಬ್ಬಳ್ಳಿಯಲ್ಲೂ ಅದೇ ರೀತಿ ಶಿಕ್ಷಕಿಯರು ತೊಂದರೆ ಅನುಭವಿಸುತ್ತಿದ್ದಾರೆ. ಶಿಕ್ಷಕಿಯರ ನಂಬರಿಗೆ ಬೇಕಾಬಿಟ್ಟಿ ಕರೆಗಳು, ಮೆಸೇಜ್ಗಳು, ವಿಡಿಯೋಗಳನ್ನು ಕಳುಹಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಇದು ತಮ್ಮ ಖಾಸಗಿ ಜೀವನಕ್ಕೆ ಧಕ್ಕೆಯಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು. ಇನ್ನು ಹಲವು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲಿ ತಿಳಿಯದ ವಿಷಯವನ್ನು ಫೋನ್ ಮಾಡಿ ಕೇಳುತ್ತಾರೆ. ಇದರಿಂದ ಕಿರಿಕಿರಿ ಅನುಭವಿಸುವಂತಾಗುತ್ತಿದೆ ಎನ್ನುತ್ತಿದ್ದಾರೆ ಪ್ರಾಧ್ಯಾಪಕಿಯರು.
ಇದಕ್ಕಾಗಿ ಆಯಾ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮಹಿಳಾ ಶಿಕ್ಷಕಿಯರಿಗೆ ಹೊಸ ಸಿಮ್ಕಾರ್ಡ್ ನೀಡಿದರೆ ಉತ್ತಮ. ಹಾಗೆಯೇ ಆನ್‌ಲೈನ್ ಆ್ಯಪ್ನಲ್ಲಿ ಶಿಕ್ಷಕರೇ ನೇರವಾಗಿ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಬದಲಿಗೆ ಶೆಡ್ಯೂಲ್ ಕ್ಲಾಸ್ ಮಾಡಿದರೆ ಚೆನ್ನಾಗಿರುತ್ತೆ. ಕಾಲೇಜಿನಲ್ಲಿ ಆಯಾ ಡಿಪಾರ್ಟ್ಮೆಂಟ್ ಜವಾಬ್ದಾರಿಯನ್ನು ನೋಡಿಕೊಳ್ಳುವುದರಿಂದ ಶಿಕ್ಷಕರ ಪಾತ್ರ ಕಡಿಮೆ ಆಗಲಿದ್ದು, ಅನಗತ್ಯ ತೊಂದರೆ ಒಳಗಾಗುವುದು ತಪ್ಪಲಿದೆ ಎನ್ನುತ್ತಾರೆ ಉಪನ್ಯಾಸಕಿಯರು.