ಬೆಂಗಳೂರು:ಮೆಟ್ರೋ ಕಾಮಗಾರಿಯಲ್ಲಿ ವೇಳೆ ಕಾರ್ಮಿಕನ ತಲೆಗೆ ಕೇಬಲ್ ತಂತಿ ಹೊಕ್ಕಿ ಕಾರ್ಮಿಕ ಮೃತಪಟ್ಟಿರುವ ಘಟನೆ ಜಯನಗರ 9ನೇ ಬ್ಲಾಕ್‌ನ ರಿಂಗ್ ರಸ್ತೆಯಲ್ಲಿರುವ ಮೆಟ್ರೋ ಪಿಲ್ಲರ್ ಬಳಿ ನಡೆದಿದೆ. ಮೃತಪಟ್ಟ ಕಾರ್ಮಿಕನನ್ನು ಜಾಖಂಡ್ ಮೂಲದ ಸಂತೋಷ್ ಹನಸದಾ ಎಂದು ಗುರುತಿಸಲಾಗಿದೆ.
ಮೆಟ್ರೋ ಕಾಮಗಾರಿ ವೇಳೆ ದುರಂತ: ತಲೆಗೆ ಕೇಬಲ್ ತಂತಿ ಹೊಕ್ಕಿ ಕಾರ್ಮಿಕ ಸಾವು
ಮೆಟ್ರೋ ಕಾಮಗಾರಿ ವೇಳೆ ಕೇಬಲ್‌ನ್ನು ಸ್ಟ್ರೆಸ್ಸಿಂಗ್ ಮಾಡುತ್ತಿದ್ದಾಗ ಮತ್ತೊಂದು ತುದಿಯ ವೆಡ್ಜ್‌ಪ್ಲೇಟ್ ಜಾರಿ ತಲೆಗೆ ಹೊಕ್ಕ ಪರಿಣಾಮ ಜಾಖಂಡ್ ಮೂಲದ ಸಂತೋಷ್ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಜಯನಗರ 9ನೇ ಬ್ಲಾಕ್‌ನ ರಿಂಗ್ ರಸ್ತೆಯಲ್ಲಿರುವ ಮೆಟ್ರೋ ಪಿಲ್ಲರ್ ಬಳಿ ಈ ದುರಂತ ಸಂಭವಿಸಿದೆ.
ಘಟನೆ ಸಂಬಂಧ ಯುಟ್ರಾಕಾನ್ ಕಂಪನಿ ಇಂಜಿನಿಯರ್, ಕಂಪನಿ ಎಕ್ಸಿಕ್ಯೂಟಿವ್ ಸೇರಿ ನಾಲ್ವರ ವಿರುದ್ಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಅಣ್ಣ ಉಲಿಸಲ್ ಬಾಸ್ಕಿ ಕೊಟ್ಟ ದೂರಿನ ಆಧಾರದ ಮೇರೆಗೆ ಯುಟ್ರಾಕಾನ್ ಸಂಸ್ಥೆಯ ಇಂಜಿನಿಯರ್ ನವನೀದ ಕೃಷ್ಣನ್, ಕಂಪೆನಿ ಎಕ್ಸಿಕ್ಯೂಟಿವ್ ಸುರೇಶ್, ನೌಕರರಾದ ವೀರಮಣಿ, ಜೀವನ್ ಮರಂಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
4 ತಿಂಗಳ ಹಿಂದೆ ಸಂತೋಷ್ ಕೆಲಸಕ್ಕೆ ಸೇರಿದ್ದ. ಸ್ಟ್ರೆಸಿಂಗ್ ಕೇಬಲ್ ಕೆಲಸದಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಡಿ.15ರಂದು ರಾತ್ರಿ ಪಾಳಿಯಲ್ಲಿ ಜಯನಗರ 9ನೇ ಬ್ಲಾಕ್‌ನ ರಿಂಗ್ ರಸ್ತೆಯಲ್ಲಿರುವ ಮೆಟ್ರೋ ಪಿಲ್ಲರ್‌ನಲ್ಲಿ ಕೇಬಲ್ ಸ್ಟ್ರೆಸ್ಸಿಂಗ್ ಕೆಲಸಕ್ಕೆ ಸಹಾಯಕನಾಗಿ ಸಂತೋಷ್‌ನ್ನು ನೇಮಿಸಲಾಗಿತ್ತು. ಡಿ.16ರಂದು ಮುಂಜಾನೆ 4ಕ್ಕೆ ಮೆಟ್ರೋ ಮೇಲ್ಸೇತುವೆಯಲ್ಲಿ 16 ಎಂ.ಎಂ. ಕೇಬಲ್‌ನ್ನು ಸ್ಟ್ರೆಸ್ಸಿಂಗ್ ಮಾಡುತ್ತಿದ್ದಾಗ ಮತ್ತೊಂದು ತುದಿಯ ವೆಡ್ಜ್‌ಪ್ಲೇಟ್ ಜಾರಿ ಒತ್ತಡದಿಂದ ಕೇಬಲ್ ಹೊರ ಬಂದಿತ್ತು. ಪರಿಣಾಮ ಸಂತೋಷ್ ತಲೆಯ ಎಡ ಭಾಗದಿಂದ ಹೊಕ್ಕು ತಲೆಯ ಬಲಭಾಗದ ವರೆಗೆ ತೂರಿ ಬಂದಿತ್ತು. ಕೂಡಲೇ ಸಂತೋಷ್‌ನನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.