ಕರ್ನಾಟಕ

karnataka

ETV Bharat / city

ಕುರುಬ ಸಮುದಾಯದ ಎಸ್​ಟಿ ಬೇಡಿಕೆ ವರದಿ ಸಲ್ಲಿಕೆ ಬಳಿಕ ಕ್ರಮ: ಸಚಿವ ಶ್ರೀರಾಮುಲು - submission of report

ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಸದಸ್ಯರಾದ ನಾರಾಯಣಸ್ವಾಮಿ, ನಜೀರ್ ಅಹಮದ್ ಅವರು ಕುರುಬ ಸಮುದಾಯದ ಎಸ್​ಟಿ ಸೇರ್ಪಡೆ, ಎಸ್​ಟಿ ಮೀಸಲು ಹೆಚ್ಚಳ ಕುರಿತು ನಿಯಮ 68ರ ಅಡಿ ಮಂಡಿಸಿದ ನಿಲುವಳಿ ಸೂಚನೆಗೆ ಶ್ರೀರಾಮುಲು ಅವರು ಲಿಖಿತ ಉತ್ತರ ನೀಡಿದ್ದಾರೆ.

ರಾಮುಲು
ರಾಮುಲು

By

Published : Feb 8, 2021, 7:54 PM IST

Updated : Feb 8, 2021, 11:58 PM IST

ಬೆಂಗಳೂರು:ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ನಡೆಯುತ್ತಿರುವ ಕುಲ ಶಾಸ್ತ್ರೀಯ ಅಧ್ಯಯನ ಮುಗಿಯಲು ಇನ್ನೂ 6 ತಿಂಗಳ ಕಾಲಾವಕಾಶ ಬೇಕಿದೆ. ಅಂತಿಮ ವರದಿ ಸರ್ಕಾರದ ಕೈ ಸೇರಿದ ನಂತರ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಸದಸ್ಯರಾದ ನಾರಾಯಣಸ್ವಾಮಿ, ನಜೀರ್ ಅಹಮದ್ ಅವರು ಕುರುಬ ಸಮುದಾಯದ ಎಸ್​ಟಿ ಸೇರ್ಪಡೆ, ಎಸ್​ಟಿ ಮೀಸಲು ಹೆಚ್ಚಳ ಕುರಿತು ನಿಯಮ 68ರ ಅಡಿ ಮಂಡಿಸಿದ ನಿಲುವಳಿ ಸೂಚನೆಗೆ ಶ್ರೀರಾಮುಲು ಅವರು ಲಿಖಿತ ಉತ್ತರ ನೀಡಿದ್ದಾರೆ.

ಕುರುಬ ಸಮುದಾಯವನ್ನು‌ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ ಕುಲ ಶಾಸ್ತ್ರೀಯ ಅಧ್ಯಯನ ನಡೆಸುತ್ತಿದೆ. ನಾಲ್ಕು ಜಿಲ್ಲೆ ಹೊರತುಪಡಿಸಿ 26 ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗುತ್ತಿದೆ ಎಂದರು.

2019ರ ಅಕ್ಟೋಬರ್​ನಿಂದ 2020ರ ಮಾರ್ಚ್‌ವರೆಗೆ 15 ಜಿಲ್ಲೆಗಳ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ. ನಂತರ ಕೊರೊನಾ ಕಾರಣಕ್ಕೆ ಸಮೀಕ್ಷೆ ಸ್ಥಗಿತವಾಗಿತ್ತು. ಈಗ ಮತ್ತೆ ಸಮೀಕ್ಷೆ ನಡೆಸುವ ಕಾರ್ಯವನ್ನು ಪುನಾರಂಭಿಸಲಾಗಿದೆ. ಇದರ ಜೊತೆಯಲ್ಲಿ ಬಳ್ಳಾರಿ, ಗದಗ, ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಸಮೀಕ್ಷೆ ಮುಗಿದಿದೆ. ಸಮೀಕ್ಷೆ ಮಾಹಿತಿಯ ಕೋಡಿಂಗ್ ಕಾರ್ಯ ಕೂಡ ಮುಗಿದಿದೆ ಎಂದು ವಿವರಿಸಿದರು.

ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳ ಕೋಡಿಂಗ್ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ 19 ಜಿಲ್ಲೆಗಳ ಕೋಡಿಂಗ್ ಕಾರ್ಯ ಮುಗಿಯಲು ಕನಿಷ್ಠ 6 ತಿಂಗಳ ಕಾಲಾವಕಾಶ ಬೇಕಿದೆ ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಕುಟುಂಬ ಸಮೀಕ್ಷೆ ಕಾರ್ಯ ನಡೆಸಲಾಗುತ್ತದೆ. 2ನೇ ಹಂತದಲ್ಲಿ ಆಳವಾದ ಅಧ್ಯಯನ ನಡೆಸಲಾಗುತ್ತದೆ. 3ನೇ ಹಂತದಲ್ಲಿ ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿಗಳ ಕುರಿತು ಅಂಕಿ-ಅಂಶಗಳನ್ನು ಸಿದ್ದಪಡಿಸಿ ವರದಿ ತಯಾರಿಸಬೇಕಾಗುತ್ತೆ. ಆ ಬಳಿಕ ತಜ್ಞರ ಸಮಿತಿಗೆ ಕರಡು ವರದಿ ಕಳುಹಿಸಿ ಅಭಿಪ್ರಾಯ ಪಡೆಯಲಾಗುತ್ತದೆ. ನಂತರ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಆ ನಂತರವೇ ಸರ್ಕಾರ ವರದಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಎಸ್​ಟಿ ಮೀಸಲಾತಿ ಹೆಚ್ಚಳ ಪ್ರಸ್ತಾಪ:ಪರಿಶಿಷ್ಟ ಪಂಗಡದವರಿಗೆ ಪ್ರಸ್ತುತ ಇರುವ ಶೇ.3ರ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುವ ಪ್ರಸ್ತಾಪದ ಬಗ್ಗೆ ನ್ಯಾ.ಹೆಚ್.ಎನ್ ನಾಗಮೋಹನ್ ದಾಸ್ ಆಯೋಗ ವರದಿ ನೀಡಿದೆ.

ವರದಿ ಪರಾಮರ್ಶೆಗೆ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈಗಾಗಲೇ ಉಪ ಸಮಿತಿ ಒಂದು ಸಭೆ ‌ನಡೆಸಿದೆ. ಸಂಪುಟ ಉಪ ಸಮಿತಿ ನೀಡುವ ವರದಿ ಪರಿಶೀಲಿಸಿ ನಂತರ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

ಗಂಗಾಮತ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಬೇಡಿಕೆಯನ್ನು ಕೇಂದ್ರದ‌ ಬುಡಕಟ್ಟು ಮಂತ್ರಾಲಯ 2ನೇ ಬಾರಿಯೂ ತಿರಸ್ಕರಿಸಿದೆ. ಹಾಗಾಗಿ, ಮತ್ತೊಮ್ಮೆ ಪತ್ರ ಬರೆದು ರಾಜ್ಯದ ಶಿಫಾರಸು ಅನುಮೋದನೆ ಮಾಡುವಂತೆ ಮನವಿ ಮಾಡಲಾಗಿದೆ. ಜೊತೆಗೆ ಕೇಂದ್ರದ ನಿರ್ದೇಶನದಂತೆ ಪ್ರಕರಣದಲ್ಲಿ ಹೆಚ್ಚುವರಿಯಾಗಿ ಸಮರ್ಥನೆ ಮತ್ತು ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Last Updated : Feb 8, 2021, 11:58 PM IST

ABOUT THE AUTHOR

...view details