ಬೆಂಗಳೂರು :ಕಾಂಗ್ರೆಸ್ ತೊರೆಯುವ ಸೂಚನೆ ನೀಡಿದ ಬೆನ್ನಲ್ಲೇ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಹತ್ವದ ಮಾತುಕತೆ ನಡೆಸಿದ್ದಾರೆ.
ಬೆನ್ಸನ್ ಟೌನ್ನಲ್ಲಿರುವ ಸಿ ಎಂ ಇಬ್ರಾಹಿಂ ಅವರ ನಿವಾಸಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಇಬ್ರಾಹಿಂ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಬ್ರಾಹಿಂ ಅವರು ಕಾಂಗ್ರೆಸ್ ಬಿಡುವ ನಿರ್ಧಾರ ಮಾಡಿದ್ದಾರೆ. ಬೇರೆ ಕೆಲವು ವಿಷಯಗಳನ್ನು ಚರ್ಚಿಸಿದ್ದೇವೆ. ಅವರ ಮೇಲೆ ಒತ್ತಡ ಹಾಕಿ ತೀರ್ಮಾನ ಮಾಡಿಸಲು ಸಾಧ್ಯವಿಲ್ಲ. ಸೂಕ್ತ ಸಮಯದಲ್ಲಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ದೇವೇಗೌಡರ ಜೊತೆ ಉತ್ತಮ ಸಂಬಂಧ
ಸಿದ್ದರಾಮಯ್ಯ ರಾಜಕೀಯಕ್ಕೆ ಬರುವ ಮೊದಲಿನಿಂದಲೇ ದೇವೇಗೌಡರ ಜೊತೆ ಇಬ್ರಾಹಿಂ ಅವರ ಜೊತೆ ಉತ್ತಮ ಒಡನಾಟ ಇದೆ. 1972ರಿಂದ ದೇವೇಗೌಡರು ಮತ್ತು ಸಿ ಎಂ ಇಬ್ರಾಹಿಂ ಮಧ್ಯೆ ಆತ್ಮೀಯತೆ ಇದೆ. ಅವರು ಹಳೆಯ ಸಂಬಂಧದಿಂದ ಹೇಳಿರಬಹುದು ಎಂದರು.
ಸಿದ್ದರಾಮಯ್ಯ ನಂಬಿಕೊಂಡು ದೇವೇಗೌಡರನ್ನು ಬಿಟ್ಟು ಬಂದೆ ಎಂಬ ಇಬ್ರಾಹಿಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಹಿಂದಿನ ಕೆಲವು ಘಟನೆಗಳನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಯಾಕೆ ಜನತಾದಳ ಬಿಡಬೇಕಾಯಿತು ಎಂಬ ವಿಷಯಗಳನ್ನು, ಇಂದಿನ ಕಾಂಗ್ರೆಸ್ನಲ್ಲಿ ನಡೆದ ಬೆಳವಣಿಗೆಗಳಿಂದ ನೆನಪು ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಓದಿ:ಭಾರತದ 'ಬ್ರಹ್ಮೋಸ್' ಖರೀದಿಸಿದ ಮೊದಲ ದೇಶ ಫಿಲಿಪ್ಪೀನ್ಸ್.. ₹2,770 ಕೋಟಿ ರೂ. ಒಪ್ಪಂದ
ಸಿ ಎಂ ಇಬ್ರಾಹಿಂ ಈ ಮೊದಲು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರುವ ಸುಳಿವು ಬಿಟ್ಟುಕೊಟ್ಟಿದ್ದರು. ಇಬ್ರಾಹಿಂ ಜೆಡಿಎಸ್ಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಕುಮಾರಸ್ವಾಮಿ ಕೂಡ ಹೇಳಿಕೆ ನೀಡಿದ್ದರು. ಇದೀಗ, ಕುಮಾರಸ್ವಾಮಿ ನೇರವಾಗಿ ಇಬ್ರಾಹಿಂ ಭೇಟಿ ಮಾಡಿರುವುದು ಹಲವು ಕುತೂಹಲಕ್ಕೆ, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ