ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ತವರು ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿಯ ಕೋಮು ಗಲಭೆ ಸೇರಿದಂತೆ ಹಲವು ವಿಚಾರದಲ್ಲಿ ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಪ್ರಸನ್ನ ಕುಮಾರ್ ಟೀಕಾ ಪ್ರಹಾರ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕಿಮ್ಮನೆ ರತ್ನಾಕರ ಮಾತನಾಡಿ, ಗೃಹ ಸಚಿವರದ್ದು ಗೂಂಡಾ ಪ್ರವೃತ್ತಿ. ಇವರು ಗಲಾಟೆ ಆಗಬೇಕು ಅಂತಲೇ ಮಾತನಾಡುತ್ತಾರೆ. ಕೆ.ಎಚ್.ಈಶ್ವರಪ್ಪ, ಜ್ಞಾನೇಂದ್ರ ಇವರೆಲ್ಲ ಗೆಲ್ಲಬೇಕು ಅಂದ್ರೆ ಇಂತಹ ಗಲಾಟೆಗಳು ನಡೆಯುತ್ತಿರಬೇಕು. ತೀರ್ಥಹಳ್ಳಿಯಲ್ಲಿ ನಡೆದ ಎಲ್ಲ ಕೋಮು ಗಲಭೆಗಳ ಹಿಂದೆ ಜ್ಞಾನೇಂದ್ರ ಇದ್ದಾರೆ. ನಂದಿತಾ ಪ್ರಕರಣದಲ್ಲಿ ಇವರು ಏನು ಮಾಡಿದ್ರು?. ಜ್ಞಾನೇಂದ್ರ ಮೇಲೆ ಐದಾರು ಕೇಸ್ಗಳಿದ್ದವು. ಇಂಥವರಿಂದ ಏನು ಆಡಳಿತ ನಿರೀಕ್ಷೆ ಮಾಡಬಹುದು?. ಇವರು ಜನರಿಗೆ ನ್ಯಾಯ ಕೊಡುವುದಕ್ಕೆ ಸರ್ಕಾರ ಮಾಡುತ್ತಿಲ್ಲ. ಆರ್ಎಸ್ಎಸ್ಗೆ ನ್ಯಾಯ ಕೊಡುವುದಕ್ಕೆ ಮಾತ್ರ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಜ್ಞಾನೇಂದ್ರ ಹೆದರಿಕೊಂಡು ತೀರ್ಥಹಳ್ಳಿಯಲ್ಲಿ ಕೂತಿದ್ದರು:ಮಂಗಳೂರಿನಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಾಗ ಜ್ಞಾನೇಂದ್ರ ಹೆದರಿಕೊಂಡು ಬಂದು ತೀರ್ಥಹಳ್ಳಿಯಲ್ಲಿ ಕೂತಿದ್ದರು. ಪಟಾಕಿ ಹೊಡೆದರೆ ಮಕ್ಕಳು ಅಮ್ಮನ ಸೆರಗಲ್ಲಿ ಅಡಗಿಕೊಳ್ಳುವಂತೆ ಹೆದರಿಕೊಂಡು ಬಂದು ಕೆಡಿಪಿ ಸಭೆ ಮಾಡುತ್ತಿದ್ದರು. ಇವರನ್ನು ಗುಡ್ಡೆಕೊಪ್ಪಲು ಗ್ರಾಮ ಪಂಚಾಯಿತಿಗೆ ಸೀಮಿತವಾಗಿ ಹೋಂ ಮಿನಿಸ್ಟರ್ ಮಾಡೋದು ಒಳ್ಳೆದು ಎಂದು ಕಿಮ್ಮನೆ ಲೇವಡಿ ಮಾಡಿದರು.