ಬೆಂಗಳೂರು: ಪ್ರಭುದ್ಧರ ಸದನದಲ್ಲಿ ಉಪಸಭಾಪತಿಯವರ ಮೇಲೆ ಹಲ್ಲೆ ನೆಡೆಸಿದ ಕಾಂಗ್ರೆಸ್ ಗೂಂಡಾ ಶಾಸಕರನ್ನು ತಕ್ಷಣದಿಂದಲೇ ಸದನದಿಂದ ಅಮಾನತು ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾತೆತ್ತಿದರೆ ಪ್ರಜಾಪ್ರಭುತ್ವದ ಪಾಠ ಮಾಡುವ ಸಿದ್ದರಾಮಯ್ಯನವರೇ ಇದೇನಾ ನೀವು ಕಾಂಗ್ರೆಸ್ಸಿನವರಿಗೆ ಮಾಡಿದ ನೀತಿಪಾಠ? ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತೆ ಸಭಾಪತಿಗಳನ್ನು ಎಳೆದಾಡುವುದು, ಸಂಖ್ಯಾಬಲ ಹೋದನಂತರವೂ ಕುರ್ಚಿಗಂಟಿ ಕುಳಿತುಕೊಳ್ಳುವುದು. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ರೀತಿ ಇದೇನಾ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಾಸಕರು ವಿಧಾನ ಪರಿಷತ್ತಿನಲ್ಲಿ ನಡೆದುಕೊಂಡ ರೀತಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನವನ್ನು ಕಾಲಕಸ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಸಂಸದರನ್ನು ಛೂ ಬಿಟ್ಟು ರಾಜ್ಯಸಭಾ ಉಪಸಭಾಪತಿ ಅವರ ಮೈಕ್ ಕಿತ್ತುಹಾಕಿಸಿತ್ತು. ಕೆಪಿಸಿಸಿ ತನ್ನ ಶಾಸಕರನ್ನು ಛೂ ಬಿಟ್ಟು ಪರಿಷತ್ ಉಪಸಭಾಪತಿಗಳನ್ನು ಪೀಠದಿಂದ ಎಳೆದು ಹಾಕಿಸಿತು. ಉಪಸಭಾಪತಿಗಳ ಕುತ್ತಿಗೆ ಹಿಡಿದು ಎಳೆದಾಡಿದ್ದು, ದೇಶದ ಇತಿಹಾದಲ್ಲಿ ಇದೇ ಮೊದಲು. ಇದು ಕಾಂಗ್ರೆಸ್ ಪಕ್ಷದವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದೆ.
ಸಿದ್ದರಾಮಯ್ಯ ಅವರು ಸಂವಿಧಾನದ ಆಶಯವನ್ನು ಎತ್ತಿಹಿಡಿಯುತ್ತಿರುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯುನ್ನತ ಗೌರವ ಸಲ್ಲಿಸುತ್ತಿರುವುದು ಎಂದು ಹಿಂದಿನ ಬಿಜೆಪಿ ಸರ್ಕಾರದ ವೇಳೆ ವಿಧಾನಸಭೆಯಲ್ಲಿ ನಡೆದ ಘಟನೆಯ ಹಳೆಯ ಫೋಟೋವನ್ನು ಪ್ರಕಟಿಸಿ ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಸಿದ್ದು ಕಾಲೆಳೆದಿದೆ.