ಕರ್ನಾಟಕ

karnataka

ETV Bharat / city

ಕೆಲಸಕ್ಕೆ ಹೋಗುವಾಗ ಕಾರ್ಮಿಕ ಮೃತಪಟ್ಟರೂ ಪರಿಹಾರ ಪಾವತಿಸಬೇಕು : ಹೈಕೋರ್ಟ್ ಮಹತ್ವದ ತೀರ್ಪು - ಹೈಕೋರ್ಟ್ ಮಹತ್ವದ ತೀರ್ಪು

ಲಸಕ್ಕೆ ತೆರಳುವ ಸಂದರ್ಭದಲ್ಲಿ ಕಾರ್ಮಿಕ ಮೃತಪಟ್ಟರೂ ಆತನ ಕುಟುಂಬಸ್ಥರು ಪರಿಹಾರ ಕೋರಲು ಅರ್ಹರು ಎಂದು ಹೈಕೋರ್ಟ್​​​ ಆದೇಶ ಹೊರಡಿಸಿದೆ.

karnataka-high-court-order-on-compensation-rules
ಕೆಲಸಕ್ಕೆ ಹೋಗುವಾಗ ಕಾರ್ಮಿಕ ಮೃತಪಟ್ಟರೂ ಪರಿಹಾರ ಪಾವತಿಸಬೇಕು : ಹೈಕೋರ್ಟ್ ಮಹತ್ವದ ತೀರ್ಪು

By

Published : Aug 21, 2021, 12:59 AM IST

ಬೆಂಗಳೂರು :ಕಾರ್ಮಿಕರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮೃತಪಟ್ಟರೂ ಅದನ್ನು ಕೆಲಸದ ಸಮಯದಲ್ಲಿ ಸಂಭವಿಸಿದ ಸಾವು ಎಂದು ಪರಿಗಣಿಸಿ, ಆತನ ಕುಟುಂಬಕ್ಕೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚಿಕ್ಕಮಗಳೂರಿನಲ್ಲಿ ಕಾರ್ಮಿಕನೋರ್ವ ಕಾಫಿ ತೋಟದ ಕೆಲಸಕ್ಕೆ ಹೋಗುವಾಗ ಮೃತಪಟ್ಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಕಾರ್ಮಿಕ ಮೃತಪಟ್ಟರೂ ಆತನ ಕುಟುಂಬಸ್ಥರು ಪರಿಹಾರ ಕೋರಲು ಅರ್ಹರು ಎಂದು ಆದೇಶ ಹೊರಡಿಸಲಾಗಿದೆ.

ಪ್ರಕರಣದ ಹಿನ್ನೆಲೆ:ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಸುಭಾಷನಗರ ನಿವಾಸಿ ಸ್ವಾಮಿಗೌಡ 2006ರ ಜುಲೈ 12ರಂದು ಕೊಳ್ಳಿಬೈಲು ಗ್ರಾಮದ ಕಾಫಿ ತೋಟದ ಕೆಲಸಕ್ಕೆ ತೆರಳುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮೃತನ ಸಂಬಂಧಿಕರು ಪರಿಹಾರ ಕೋರಿ ಕಾರ್ಮಿಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಕಾರ್ಮಿಕ ಆಯುಕ್ತರು 2010ರ ಅಕ್ಟೋಬರ್ 28ರಂದು ಕಾರ್ಮಿಕನ ಕುಟುಂಬಕ್ಕೆ ಎಸ್ಟೇಟ್ ಮಾಲೀಕ 75 ಸಾವಿರ ಹಾಗೂ ವಿಮಾ ಸಂಸ್ಥೆ 1.1 ಲಕ್ಷ ರೂಪಾಯಿ ಪರಿಹಾರವನ್ನು 2006ರಿಂದ ಅನ್ವಯಿಸುವಂತೆ ಶೇ.75 ಬಡ್ಡಿದರದ ಜೊತೆ ಪಾವತಿಸುವಂತೆ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ವಿಮಾಸಂಸ್ಥೆ ಮತ್ತು ಕಾಫಿ ಎಸ್ಟೇಟ್​ ಮಾಲೀಕರು ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ವೇಳೆ ವಿಮಾ ಸಂಸ್ಥೆ ಕಾರ್ಮಿಕನ ಸಾವು ಅಪಘಾತವಲ್ಲ. ಆ ದಿನ ಕಾರ್ಮಿಕ ಕೆಲಸಕ್ಕೆ ಹಾಜರಾಗಿರಲಿಲ್ಲ. ಮಳೆಯಿಂದಾಗಿ ಹಸಿ ನೆಲದ ಮೇಲೆ ಜಾರಿ ಬಿದ್ದು ಮೃತಪಟ್ಟಿದ್ದಾನೆ. ಕೆಲಸದ ಅವಧಿಯಲ್ಲಿ ಸಾವು ಸಂಭವಿಸದೇ ಇರುವುದರಿಂದ ಮೃತನ ಕುಟುಂಬಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು.

ಇದೇ ವೇಳೆ ಎಸ್ಟೇಟ್ ಮಾಲೀಕ, ಬೆಳಗ್ಗೆ 8ರಿಂದ ಸಂಜೆ 4.30ವರೆಗೆ ಕೆಲಸದ ಅವಧಿ. ಆದರೆ, ಕಾರ್ಮಿಕ ಬೆಳಗ್ಗೆ 7 ಗಂಟೆಗೆ ಮೃತಪಟ್ಟಿದ್ದಾನೆ. ಇನ್ನು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ವಿಮೆ ಮಾಡಿಸಿದ್ದೇವೆ. ಹೀಗಾಗಿ, ಮೃತನಿಗೆ ಪರಿಹಾರ ಪಾವತಿಸುವ ಹೊಣೆ ತನ್ನದಲ್ಲ ಎಂದಿದ್ದರು.

ಕೋರ್ಟ್ ತೀರ್ಪು :ವಾದ, ಪ್ರತಿವಾದ ದಾಖಲಿಸಿಕೊಂಡ ಪೀಠ, ಕಾರ್ಮಿಕ ಸ್ವಾಮಿಗೌಡ ಕೆಲಸಕ್ಕೆ ಬರುವಾಗಲೇ ಸಾವನ್ನಪ್ಪಿದ್ದಾನೆ. ಮಂಜು ಸರ್ಕಾರ್ ಮತ್ತು ಮೊಬೀಷ್ ಮಿಯಾ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಕೆಲಸಕ್ಕೆ ಬರುವ ಮತ್ತು ಹಿಂದಿರುಗುವ ಸಮಯವನ್ನೂ ಕೆಲಸದ ಅವಧಿ ಎಂದು ಹೇಳಿದೆ. ಒಂದು ವೇಳೆ ಕಾರ್ಮಿಕ ಮನೆಯಲ್ಲಿ ಮೃತಪಟ್ಟಿದ್ದರೆ ಮಾಲೀಕರ, ವಿಮಾ ಸಂಸ್ಥೆಯ ವಾದ ಪರಿಗಣಿಸಬಹುದಿತ್ತು. ಆದರೆ, ಕೆಲಸಕ್ಕೆ ತೆರಳುವಾಗ ಮಾಲೀಕನ ಜಾಗದಲ್ಲೇ ಕಾಲುಜಾರಿ ಬಿದ್ದು ಮೃತಪಟ್ಟಿರುವುದರಿಂದ, ಪರಿಹಾರ ಪಾವತಿಸಬೇಕು. ಹೀಗಾಗಿ ಕಾರ್ಮಿಕ ಆಯುಕ್ತರ ಆದೇಶದಂತೆ ಮೃತನ ಕುಟುಂಬಕ್ಕೆ ವಿಮಾ ಸಂಸ್ಥೆ ಮತ್ತು ಎಸ್ಟೇಟ್ ಮಾಲೀಕ ಪರಿಹಾರ ಪಾವತಿಸಬೇಕು ಎಂದು ತೀರ್ಪು ನೀಡಿದೆ.

ABOUT THE AUTHOR

...view details