ಬೆಂಗಳೂರು: 'ಕನ್ನಡಕ್ಕಾಗಿ ನಾವು' ಅಭಿಯಾನದ ಅಂಗವಾಗಿ ಲಕ್ಷ ಕಂಠಗಳ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಇಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಮತ್ತು ಸಂಸ್ಕೃತ ಇಲಾಖೆಯು ರಾಜ್ಯಾದ್ಯಂತ ‘ಮಾತಾಡ್ ಮಾತಾಡ್ ಕನ್ನಡ’ ಘೋಷ ವಾಕ್ಯದಡಿ 'ಕನ್ನಡಕ್ಕಾಗಿ ನಾವು' ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಗೀತೆಗಳ ಗಾಯನ ಅಭಿಯಾನದಲ್ಲಿ ರಾಜ್ಯ ಬಿಜೆಪಿ ಸಹ ಭಾಗಿಯಾಗುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಮೇಲಿನ ಪ್ರೀತಿಯನ್ನ ಅಭಿವ್ಯಕ್ತಿಗೊಳಿಸಿತು.
ಬಿಜೆಪಿ ಪಕ್ಷದ ಕಚೇರಿ ಜಗನ್ನಾಥ ಭವನದ ಮುಂಭಾಗದಲ್ಲಿ ನೂರಾರು ವಿದ್ಯಾರ್ಥಿಗಳಿಂದ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಂಮವ’, ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಮೂರು ಗೀತೆಗಳನ್ನ ಇಂದು ಬೆಳಗ್ಗೆ 11 ಗಂಟೆಗೆ ಹೇಳಲಾಯಿತು.
ರಾಜ್ಯ ಬಿಜೆಪಿ ಮುಂಭಾಗ ಮೊಳಗಿದ ಕನ್ನಡ ಹಾಡುಗಳು ಕಲರವ ಗೀತೆಗಳ ಗಾಯನದ ನಂತರ ಸಂಕಲ್ಪವೊಂದನ್ನು ಸ್ವೀಕರಿಸಲಾಯಿತು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಸಂಕಲ್ಪ ಮಾಡಲಾಯಿತು.
ಸೋದರಿ ನಿವೇದಿತಾ ಜಯಂತಿ:
ಸ್ವಾಮಿ ವಿವೇಕಾನಂದ ಅವರ ಶಿಷ್ಯೆ ಸೋದರಿ ನಿವೇದಿತಾ ಅವರ ಜಯಂತಿ ಅಂಗವಾಗಿ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಿವೇದಿತಾ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸ್ವಾಮಿ ವಿವೇಕಾನಂದರ ಶಿಷ್ಯೆಯಾಗಿ ಸನ್ಯಾಸತ್ವ ಸ್ವೀಕರಿಸಿದ ನಿವೇದಿತಾ, ಭಾರತದ ಹಿರಿಮೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಈ ವೇಳೆ ಪುತ್ತೂರು ಶಾಸಕ ಸಂಜೀವ ಮಠಂದೂರು, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.