ಬೆಂಗಳೂರು: 2022ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉದ್ಯೋಗ ನೇಮಕಾತಿ ಆಸಕ್ತಿ ಶೇ. 41 ರಷ್ಟಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 3ರಷ್ಟು ಏರಿಕೆ ಕಂಡಿದೆ ಎಂದು ಟೀಮ್ ಲೀಸ್ ಅಧ್ಯಯನ ವರದಿ ಹೇಳಿದೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇ. 10 ರಷ್ಟು ಜಿಡಿಪಿ ಅಂದಾಜಿಸಿದ್ದು, ಸದ್ಯ ಪೂರೈಕೆಯಲ್ಲಿ ಯಾವುದೇ ಅಡಚಣೆಗಳು ಇಲ್ಲ. ಹಾಗೂ ವ್ಯಕ್ತಿಗತ ಸೇವೆಗಳಲ್ಲಿ (contact intensive services) ಬೇಡಿಕೆ ಹೆಚ್ಚಳ ಆಗಿವೆ. ಜಗತ್ತಿನಾದ್ಯಂತ ಕೂಡ ಉದ್ಯೋಗ ನೇಮಕಾತಿ ಆಸಕ್ತಿ ಹೆಚ್ಚು ಆಗುತ್ತಿದೆ ಎಂದು ಈ ವರದಿ ಹೇಳಿದೆ.
ಮಾಹಿತಿ ತಂತ್ರಜ್ಞಾನ, ಆರೋಗ್ಯ ಸೇವೆ ಹಾಗೂ ಎಫ್ಎಂಸಿಜಿ ಕ್ಷೇತ್ರದಲ್ಲಿ ಉದ್ಯೋಗ ನೇಮಕಾತಿ ಆಸಕ್ತಿ ಹೆಚ್ಚಿವೆ. ಮೆಟ್ರೋ ಹಾಗೂ ಮೊದಲ ದರ್ಜೆ ನಗರದಲ್ಲಿ ನೇಮಕಾತಿ ಆಸಕ್ತಿ ಶೇ 56 ರಷ್ಟು ಇದ್ದು, ಎರಡನೇ ಹಾಗೂ ಮೂರನೇ ದರ್ಜೆಯ ನಗರಗಳಲ್ಲಿ ಉದ್ಯೋಗ ನೇಮಕಾತಿ ಆಸಕ್ತಿ ಕ್ರಮೇಣ ಹೆಚ್ಚಳ ಆಗುತ್ತಿದೆ. ಈ ಪೈಕಿ ಬೆಂಗಳೂರು ಹಾಗೂ ಡೆಲ್ಲಿ ಉದ್ಯೋಗಾವಕಾಶ ನೀಡುವಲ್ಲಿ ಮುಂಚೂಣಿಯಲ್ಲಿ ಇದೆ. ಫ್ರೆಶರ್ (ಎಂಟ್ರಿ ಲೆವೆಲ್ ಕೆಲಸ)ಕ್ಕೆ ಹೆಚ್ಚು ಅವಕಾಶ ಬೆಳೆಯುತ್ತಿವೆ ಎಂದು ವರದಿ ಹೇಳಿದೆ.
ಇದಲ್ಲದೇ ಸೇಲ್ಸ್ ವಲಯದಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುತ್ತಿದ್ದು, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಹಾಗೂ ಕೆಪಿಓ (knowledge process outsourcing) ಕ್ಷೇತ್ರದಲ್ಲಿ ಕೆಲಸ ಬಿಡುವವರ (attrition) ಸಂಖ್ಯೆ ಹೆಚ್ಚಿದೆ.