ಬೆಂಗಳೂರು: ದೇಶದ ಸ್ಥಿತಿ ಹದಗೆಡಲು ಕಾರಣ ಎರಡು ರಾಷ್ಟ್ರೀಯ ಪಕ್ಷಗಳು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಗುಡುಗಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ಪರಿಸ್ಥಿತಿಯನ್ನು ವೀಕ್ಷಿಸಿದ ನಂತರ ಗಣಪತಿ ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಏನೇನು ಕೆಲಸ ಮಾಡಿದ್ದೇನೆ ಎಂಬುದರ ಬಗ್ಗೆ ಮಾತನಾಡಬಹುದು. ಆದರೆ, ಅದಕ್ಕೂ ಸಮಯ ಬರುತ್ತದೆ.
ಕಾಂಗ್ರೆಸ್, ಬಿಜೆಪಿ ರಾಜ್ಯಕ್ಕಾಗಿ ಏನೇನು ಮಾಡಿವೆ. ಜೆಡಿಎಸ್ ಏನು ಮಾಡಿದೆ, ಎಲ್ಲದಕ್ಕೂ ಬಹಿರಂಗ ಚರ್ಚೆಗೆ ಸಿದ್ದ ಎಂದರು. ದಾಸರಹಳ್ಳಿ ಕ್ಷೇತ್ರದ ಜನರ ಪರವಾಗಿ ನಾನು ಇರುತ್ತೇನೆ. ಅಭಿವೃದ್ಧಿ ಆಗುವವರೆಗೂ ಹೋರಾಟ ಮಾಡುತ್ತೇನೆ ಎಂದರು. ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಒಬ್ಬರೇ ಇರೋದು. ಇದನ್ನು ಸಹಿಸಿಕೊಳ್ಳೋದಕ್ಕೆ ಆಗುತ್ತಿಲ್ಲ.
ಕುಮಾರಸ್ವಾಮಿ ಕೊಟ್ಟ ಹಣ ರಿಲೀಸ್ ಮಾಡದೇ ಕೆಳ ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮ ಸಮಾಧಾನಕ್ಕೆ ಒಂದು ದಿನಕ್ಕೆ ನಾನು ಬಂದಿಲ್ಲ. ಚುನಾಯಿತ ಪ್ರತಿನಿಧಿಗೆ ಈ ರೀತಿ ಮಾಡಬಾರದು. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ. ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ದಾಸರಹಳ್ಳಿ ಜನರಿಗೆ ಭರವಸೆ ನೀಡಿದರು.
ಹೋರಾಟದ ಎಚ್ಚರಿಕೆ :ಹೋರಾಟದಿಂದಲೇ ಸಮಸ್ಯೆ ಬಗೆಹರಿಯಬೇಕು ಎಂದಾದರೆ ಅದನ್ನು ಮಾಡುತ್ತೇನೆ. ಸಿಎಂಗೆ ಮನವಿ ಪತ್ರ ಕೊಡುತ್ತೇನೆ. ಅವರು ಅದಕ್ಕೆ ಗೌರವ ಕೊಡದೇ ಇದ್ದರೆ, ಶಾಂತಿಯುತ ಪ್ರತಿಭಟನೆಯೊಂದೇ ದಾರಿ ಎಂದು ಗೌಡರು ಎಚ್ಚರಿಸಿದರು. ನಮ್ಮ ಅಹವಾಲುಗಳನ್ನು ಕಳುಹಿಸಿಕೊಟ್ಟ ನಂತರ ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲದೇ ಹೋದರೆ ಎಷ್ಟು ದೂರ ಹೋಗೋದಿಕ್ಕೂ ನಾನು ರೆಡಿ. ನ್ಯಾಯಯುತ ಹೋರಾಟ ಮಾಡಲು ನಾನು ಸಿದ್ಧ ಎಂದರು.
ದಾಸರಹಳ್ಳಿ ಕ್ಷೇತ್ರಕ್ಕೆ ಅನುದಾನ ತಾರತಮ್ಯ ಮಾಡಿರುವ ಕುರಿತು ಕಿಡಿಕಾರಿದ ದೇವೇಗೌಡರು, ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಾಗಬೇಕು. ಸಹಿಸಲಾಗದ ಹೇಡಿಗಳು ಪ್ರತಿಯೊಂದಕ್ಕೂ ಅಡ್ಡಿ ಮಾಡುತ್ತಿದ್ದಾರೆ. ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ. ಯಾವುದೇ ಕಾರ್ಯಕ್ರಮ ರೂಪಿಸುವುದಕ್ಕೆ ಸಿದ್ಧನಿದ್ದೇನೆ ಎಂದು ಕ್ಷೇತ್ರದ ನಿವಾಸಿಗಳಿಗೆ ಅಭಯ ನೀಡಿದರು.
ಸಿಎಂ ಮನೆ ಮುಂದೆ ಧರಣಿ :ಮುಖ್ಯಮಂತ್ರಿಗಳ ಬಳಿ ನಾನೇ ಹೋಗುತ್ತೇನೆ. ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ರಾಜಕೀಯ ಮಾಡಿದರೆ ಸಿಎಂ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು.