ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಯಡಿಯೂರಪ್ಪ ನಿರ್ಗಮನಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎನ್ನುವ ಅನುಮಾನಗಳಿಗೆ ಪುಷ್ಟಿ ನೀಡುವ ವಿದ್ಯಮಾನಗಳು ನಡೆಯುತ್ತಿವೆ. ಬಾಕಿ ಕೆಲಸಗಳತ್ತ ಯಡಿಯೂರಪ್ಪ ಚಿತ್ತ, ಆಡಿಯೋ ವೈರಲ್, ರಾಜ್ಯಪಾಲರ ದೆಹಲಿ ಪ್ರವಾಸ. ಹೀಗೆ ಒಂದಕ್ಕೊಂದು ಘಟನೆಗಳು ಅನುಮಾನವನ್ನು ಹೆಚ್ಚಿಸುತ್ತಿವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದ ನಂತರ ನಾಯಕತ್ವದ ಬದಲಾವಣೆ ವಿಷಯ ಹೊಸ ತಿರುವು ಪಡೆದುಕೊಂಡಿದೆ. ಸದ್ಯಕ್ಕೆ ಯಾವುದೇ ನಾಯಕರು ನಾಯಕತ್ವ ಬದಲಾವಣೆ ಹೇಳಿಕೆ ನೀಡದೇ ಇದ್ದರೂ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಯಡಿಯೂರಪ್ಪ ನಿರ್ಗಮನಕ್ಕೆ ಸಿದ್ಧರಾಗುತ್ತಿದ್ದಾರಾ ಎನ್ನುವ ಅನುಮಾನ ಮೂಡಿಸುತ್ತಿದೆ.
ಅನುಮಾನ ಹುಟ್ಟಿಸಿದ ಕಾಪು ಸಿದ್ದಲಿಂಗಸ್ವಾಮಿ ನೇಮಕ
ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರೂ ಅವರ ಇತ್ತೀಚಿನ ನಡೆ ಬೇರೆ ರೀತಿಯಲ್ಲಿಯೇ ಇದೆ. ಇತ್ತೀಚೆಗಷ್ಟೇ ಹೈಕಮಾಂಡ್ ಹೇಳಿದರೆ, ರಾಜೀನಾಮೆಗೆ ಸಿದ್ಧ ಎಂದಿದ್ದ ಯಡಿಯೂರಪ್ಪ ಸರ್ಕಾರದ ಎರಡು ವರ್ಷದ ಸಮಾರಂಭಕ್ಕೂ ಮುನ್ನವೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದಾರೆ. ತಮ್ಮ ಆಪ್ತ ಕಾಪು ಸಿದ್ದಲಿಂಗಸ್ವಾಮಿಗೆ ತಮ್ಮ ರಾಜಕೀಯ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಸಿ.ಪಿ. ಯೋಗೇಶ್ವರ್ ಇಲಾಖೆಯಡಿ ಬರುವ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ತಡೆ ಹಿಡಿದಿದ್ದ ಅನುದಾನ ಬಿಡುಗಡೆ
ಈಶ್ವರಪ್ಪ ಅಸಮಾಧಾನದಿಂದಾಗಿ ಹೈಕಮಾಂಡ್ ಸೂಚನೆ ಮೇರೆಗೆ ಈ ಹಿಂದೆ ತಡೆ ಹಿಡಿದಿದ್ದ ಶಾಸಕರ ಅನುದಾನವನ್ನು ಇಂದು ಬಿಡುಗಡೆ ಮಾಡಿದ್ದಾರೆ. ಬಾಕಿ ಕಡತಗಳ ವಿಲೇವಾರಿ ಮಾಡುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಯಡಿಯೂರಪ್ಪ ಈ ಬಾರಿ ನಿರ್ಗಮನಕ್ಕೆ ಸಿದ್ಧತೆ ನಡೆಸುತ್ತಿದ್ದಾರಾ ಎನ್ನುವ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಆಡಿಯೋ ಅಸಲಿಯೋ, ನಕಲಿಯೋ ಎನ್ನುವ ವಿಷಯವನ್ನೇ ಗಂಭೀರವಾಗಿ ಪರಿಗಣಿಸದ ಬಿಜೆಪಿ ನಾಯಕರು ಕೇವಲ ವೈರಲ್ ಮಾಡಿದ್ದು, ಯಾರು ಎನ್ನುವ ತನಿಖೆಗೆ ಒತ್ತಾಯಿಸುತ್ತಿದ್ದಾರೆ.
ದೆಹಲಿಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್
ಇದು ಆಡಿಯೋದಲ್ಲಿನ ವಿಷಯ ಸತ್ಯದಿಂದಲೇ ಕೂಡಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ದಿಢೀರ್ ನವದೆಹಲಿಗೆ ತೆರಳಲಿದ್ದಾರೆ. ರಾಜ್ಯಪಾಲರೇ ದೆಹಲಿಗೆ ತೆರಳಿದರಾ ಅಥವಾ ಕೇಂದ್ರದ ನಾಯಕರು ಕರೆಸಿಕೊಂಡಿದ್ದಾರಾ ಎನ್ನುವುದು ನಿಗೂಢವಾಗಿದೆ.
ಒಟ್ಟಿನಲ್ಲಿ ಈವರೆಗೂ ಯಡಿಯೂರಪ್ಪ ವಿರೋಧಿ ಬಣ ನಾಯಕತ್ವ ಬದಲಾವಣೆ ಹೇಳಿಕೆ ನೀಡುತ್ತಾ ಬಂದಿತ್ತು. ಅದು ವದಂತಿ ರೂಪ ಪಡೆದು ಮಾಯವಾಗುತ್ತಿತ್ತು. ಆದರೆ, ಸದ್ಯಕ್ಕೆ ವಿರೋಧಿ ಬಣ ಮೌನದಲ್ಲಿದೆ. ಆದರೂ ನಾಯಕತ್ವ ಬದಲಾವಣೆ ವಿಷಯ ಚರ್ಚೆಗೆ ಬಂದಿದೆ. ರಾಜ್ಯ ಬಿಜೆಪಿಯ ಮಹಾನಾಯಕನ ನಿರ್ಗಮನವಾಗಲಿದೆಯಾ? ಅಥವಾ ಕೇವಲ ವದಂತಿಗಷ್ಟೇ ಸೀಮಿತವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಸಿಎಂ ಸ್ಥಾನ ಬದಲಾವಣೆ ಮಾಡಿದರೆ ಬಿಜೆಪಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ: ರಂಭಾಪುರಿ ಶ್ರೀ