ಬೆಂಗಳೂರು: ನಗರದ ಅತೃಪ್ತ ಶಾಸಕರು ವಿಧಾನಸಭೆಯಲ್ಲಿ ಪಕ್ಷಕ್ಕೆ ಕೈ ಕೊಟ್ಟಂತೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿಯೂ ಅನರ್ಹ ಶಾಸಕರು ಮತ್ತವರ ಬೆಂಬಲಿಗ ಕಾರ್ಪೋರೇಟರ್ಗಳು, ಕೈ ಕೊಡುವ ಸುಳಿವು ಕಾಂಗ್ರೆಸ್ ಪಕ್ಷದವರಿಗೆ ಸಿಕ್ಕಿದೆ.
ಮೇಯರ್ ಚುನಾವಣೆಗೆ ಕುಸಿಯುತ್ತಿದೆಯಾ ಕಾಂಗ್ರೆಸ್ನ ಆತ್ಮವಿಶ್ವಾಸ? ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಐದನೇ ಅವಧಿಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ.
ನಾಲ್ಕನೇ ಅವಧಿಯ ಮೇಯರ್-ಉಪಮೇಯರ್ ಆಡಳಿತ ಸೆಪ್ಟೆಂಬರ್ 28 ಕ್ಕೆ ಮುಕ್ತಾಯಗೊಳ್ಳಲಿದೆ. ಪ್ರತಿ ವರ್ಷ ಒಂದು ತಿಂಗಳ ಮೊದಲೇ ಮೇಯರ್ -ಉಪಮೇಯರ್ ಚುನಾವಣೆ ಕುರಿತಂತೆ ಪಾಲಿಕೆ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗುತ್ತಿತ್ತು. ಆಕಾಂಕ್ಷಿಗಳ ಚಟುವಟಿಕೆ ಗರಿಗೆದರುತ್ತಿತ್ತು. ಅಲ್ಲದೆ ಮೇಯರ್ ಸ್ಥಾನದ ರೇಸ್ನಲ್ಲಿರುವ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಾ ಹೋಗುತ್ತಿತ್ತು.
ಆದ್ರೆ ಐದನೇ ಅವಧಿಯ ಪಾಲಿಕೆ ಮೇಯರ್ ಚುನಾವಣೆ ಕಾಂಗ್ರೆಸ್ ವಲಯದಲ್ಲಿ ಕಳೆಗುಂದಿದೆ. ಇದಕ್ಕೆ ಸಾಕ್ಷಿಯೆಂಬಂತಿದೆ, ಪ್ರತೀ ವರ್ಷ ಮೇಯರ್ ಚುನಾವಣೆಯ ಸೂತ್ರಧಾರಿಯಾಗಿರುತ್ತಿದ್ದ ಶಾಸಕ ರಾಮಲಿಂಗಾರೆಡ್ಡಿಯವರ ಹೇಳಿಕೆ. ಈಟಿವಿ ಭಾರತದ ಜೊತೆ ಮಾತನಾಡಿದ ರಾಮಲಿಂಗಾರೆಡ್ಡಿ, ಐದನೇ ಬಾರಿಯೂ ಮೇಯರ್- ಉಪಮೇಯರ್ ಚುನಾವಣೆ ಆಗುತ್ತೆ. ಸಂಖ್ಯಾಬಲ ಸ್ವಲ್ಪ ಏರುಪೇರಾಗಿದೆ. ಏನಾಗುತ್ತೋ ನೋಡೋಣ ಎಂದು ಮಾತು ನಿಲ್ಲಿಸಿದರು. ಚುನಾವಣೆ ವೇಳೆ ಯಾರ್ಯಾರು ಯಾವ ಕಡೆಗೆ ಹೋಗುತ್ತಾರೋ ನೋಡೋಣ ಎಂದರು.
ಒಟ್ಟಿನಲ್ಲಿ ಈ ಬಾರಿ ಸಂಖ್ಯಾಬಲ ಕಳೆದುಕೊಂಡಿರುವ ಕಾಂಗ್ರೆಸ್ಗೆ ತಮ್ಮ ಪಕ್ಷದಿಂದ ಮೇಯರ್ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂಬುದು ಖಚಿತವಾದಂತಿದೆ. ಅಲ್ಲದೆ ಮೊದಲಿನಿಂದಲೂ ಮಂಜುನಾಥ್ ರೆಡ್ಡಿ, ಪದ್ಮಾವತಿ, ಸಂಪತ್ ರಾಜ್ ಹಾಗೂ ಗಂಗಾಂಬಿಕೆ ಈ ನಾಲ್ವರನ್ನೂ ಮೇಯರ್ ಮಾಡುವಲ್ಲಿ ರಾಮಲಿಂಗಾ ರೆಡ್ಡಿಯವರ ಪಾತ್ರ ದೊಡ್ಡದಿತ್ತು. ಬಿಜೆಪಿ ಕಾರ್ಪೋರೇಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರೂ, ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅಲ್ಲದೆ ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರೂ, ವಿಧಾನ ಪರಿಷತ್ ಸದಸ್ಯರ ಓಟುಗಳನ್ನೂ ಸೇರಿಸಿ ಕಾಂಗ್ರೆಸ್ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗುವಂತೆ ಮಾಡಿದ್ದು ರಾಮಲಿಂಗಾ ರೆಡ್ಡಿ.
ಇನ್ನು ಈ ಬಾರಿಯ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದಿದ್ದು, ಎಂ ಶಿವರಾಜು, ಗುಣಶೇಖರ್ ಹಾಗೂ ರಿಜ್ವಾನ್. ಇವರ್ಯಾರೂ ರಾಮಲಿಂಗಾ ರೆಡ್ಡಿ ಶಿಷ್ಯರಲ್ಲದ ಕಾರಣ, ಹಾಗೂ ಕಾಂಗ್ರೆಸ್ ಶಾಸಕರು ಅನರ್ಹರಾಗಿರುವ ಕಾರಣ ಸಂಖ್ಯಾಬಲವೂ ಕುಗ್ಗಿ ಹೋಗಿದ್ದು, ಸ್ಪರ್ಧೆಯ ಬಗ್ಗೆ ರಾಮಲಿಂಗಾ ರೆಡ್ಡಿ ಸೇರಿದಂತೆ ಪಾಲಿಕೆ ಕಾಂಗ್ರೆಸ್ ಸದಸ್ಯರು ಕೈಚೆಲ್ಲಿದ್ದಾರೆ.
ನಗರದ ಪ್ರಮುಖ ಶಾಸಕರಾದ ಮುನಿರತ್ನ, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜು, ಗೋಪಾಲಯ್ಯರಂತಹ ಪ್ರಮುಖ ಶಾಸಕರೇ ಅನರ್ಹರಾಗಿರುವುದರಿಂದ ಬೆಂಬಲವೇ ಇಲ್ಲದಾಗಿದೆ. ಅಲ್ಲದೆ ಈ ಶಾಸಕರ ಬೆಂಬಲಿಗ ಕಾರ್ಪೋರೇಟರ್ಸ್ ಸಹ ಕಾಂಗ್ರೆಸ್-ಜೆಡಿಎಸ್ ಬೆಂಬಲಿಸುವುದು ಕಷ್ಟಸಾಧ್ಯ.
ಈ ಬಗ್ಗೆ ಅನರ್ಹ ಶಾಸಕ ಮುನಿರತ್ನ ಇಂದು ಮಾತನಾಡಿ, ಸಂಖ್ಯಾಬಲ ಯಾರಿಗೆ ಇದೆಯೋ ಅವರೇ ಮೇಯರ್ ಆಗ್ತಾರೆ. ಕಳೆದ ನಾಲ್ಕು ವರ್ಷದಂತೆ ಆಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಸಂಖ್ಯಾಬಲದ ಕೊರತೆಯಿಂದ ಕಾಂಗ್ರೆಸ್ ಮೇಯರ್ ಚುನಾವಣೆಯಿಂದ ದೂರ ಉಳಿಯಲಿದೆ ಎಂಬ ಮಾತುಗಳೇ ದಟ್ಟವಾಗಿದೆ. ಆದರೂ ನಾಲ್ಕು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಐದನೇ ಬಾರಿಯಲ್ಲೂ ಅಧಿಕಾರಕ್ಕಾಗಿ ಕಡೆಯವರೆಗೂ ಜಟಾಪಟಿ ನಡೆಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 28 ರಂದು ಮೇಯರ್ ಅವಧಿ ಮುಕ್ತಾಯಗೊಳ್ಳಲಿದ್ದು, ಮುಂದಿನ ಚುನಾವಣೆ ತೀವ್ರ ಕುತೂಹಲದಿಂದ ಇರಲಿದೆ.