ಬೆಂಗಳೂರು: ನಾಲ್ಕೂವರೆ ವರ್ಷಗಳ ಹಿಂದೆ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿಗಳ ವಿಚಾರಣೆಯನ್ನು ಇದೇ ಜುಲೈ 4 ರಿಂದ 8ರವರೆಗೆ ನಿರಂತರವಾಗಿ ನಡೆಸಲಾಗುವುದು ಎಂದು ಬೆಂಗಳೂರು ನಗರ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ಸ್ಪಷ್ಟಪಡಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಲಂಕೇಶ್ ಸಾಕ್ಷ್ಯ ದಾಖಲಿಸಿಕೊಂಡ ಬಳಿಕ ನ್ಯಾಯಾಧೀಶ ಚಂದ್ರಶೇಖರ ಮೃತ್ಯುಂಜಯ ಜೋಶಿ ಈ ಆದೇಶ ಹೊರಡಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ನಡೆದು ನಾಲ್ಕು ವರ್ಷದ ನಂತರ ವಿಚಾರಣೆಗೆ ವೇಗ ದೊರೆತಿದೆ. ಪ್ರಕರಣ ಸಂಬಂಧ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆ ಗೌರಿ ಲಂಕೇಶ್ ಸಹೋದರಿ ಕವಿತಾ ಅವರು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜತೆಗೆ, ವಿಚಾರಣೆ ವೇಳೆ 18 ಆರೋಪಿಗಳ ಪೈಕಿ 11 ಮಂದಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ಉಳಿದ 7 ಮಂದಿ ಆರೋಪಿಗಳು ಗೈರಾಗಿದ್ದರು.