ಕರ್ನಾಟಕ

karnataka

By

Published : Oct 3, 2021, 3:56 PM IST

ETV Bharat / city

ಪಂಜಾಬ್ ಪರಿಸ್ಥಿತಿ: ರಾಜ್ಯ ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟಕ್ಕೆ ಎಚ್ಚರಿಕೆ ಗಂಟೆ

ಮೊದಲು ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಂತರ ನಾಯಕತ್ವದ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ಹಿರಿಯ ನಾಯಕರು ಸಲಹೆ ನೀಡುತ್ತಿದ್ದಾರೆ. ಆದರೆ ಇದುವರೆಗೂ ಅದನ್ನು ತಲೆಗೆ ಹಾಕಿಕೊಳ್ಳದೆ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮದೇ ಆದ ಬೆಂಬಲಿಗರ ಗುಂಪು ಕಟ್ಟಿಕೊಂಡು ನಾಯಕತ್ವ ರೂಪಿಸಿಕೊಳ್ಳುವ ಯತ್ನದಲ್ಲಿದ್ದಾರೆ.

siddaramaiah and DK shivakumar
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ

ಬೆಂಗಳೂರು:ಇಬ್ಬರ ಜಗಳ ಮೂರನೇೆಯವನಿಗೆ ಲಾಭ ಎಂಬ ಗಾದೆ ಮಾತಿಗೆ ಪುಷ್ಟಿ ನೀಡುವ ರೀತಿ ಪಂಜಾಬ್ ಕಾಂಗ್ರೆಸ್ ರಾಜಕೀಯ ಬದಲಾಗಿದ್ದನ್ನು, ರಾಜ್ಯ ಕಾಂಗ್ರೆಸ್ ನಾಯಕರು ಅರಿಯಬೇಕು ಎಂಬ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ.

ಪಂಜಾಬ್​​ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಕ್ಷದ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ನಡುವಿನ ಕಿತ್ತಾಟ ಒಂದು ಹಂತದ ತಾರ್ಕಿಕ ಅಂತ್ಯ ಕಂಡಿದೆ. ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬಂತೆ, ಚರಣ್ ಜಿತ್ ಸಿಂಗ್ ಚನ್ನಿ ನೂತನ ಮುಖ್ಯಮಂತ್ರಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. ತಾವು ಮುಖ್ಯಮಂತ್ರಿಗಳಾಗಬೇಕೆಂದು ಕಸರತ್ತು ನಡೆಸಿದ ಸಿಧುಗೆ ತೀವ್ರ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬಾರದು ಎಂದು ಹಠಕ್ಕೆ ಬಿದ್ದಿದ್ದ ಅಮರಿಂದರ್ ಸಿಂಗ್​ಗೆ ಹಿನ್ನಡೆಯಾಗಿದೆ.

ಇಲ್ಲಿ ಇಬ್ಬರು ಹಿರಿಯ ನಾಯಕರ ಕಿತ್ತಾಟ ಮತ್ತೊಬ್ಬರಿಗೆ ಲಾಭವಾಗಿರುವುದನ್ನು ಗಮನಿಸಿರುವ ರಾಜಕೀಯ ಪಂಡಿತರು ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್​​​ನ ಸ್ಥಿತಿ ಇದೇ ಇದ್ದು, ಇಬ್ಬರು ದಿಗ್ಗಜ ನಾಯಕರ ಕಿತ್ತಾಟ ಮೂರನೇಯವರಿಗೆ ಅವಕಾಶ ಸಿಗುವಂತೆ ಮಾಡುವಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಸ್ಥಿತಿ:
ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮುಂದಿನ ನಾಯಕತ್ವಕ್ಕಾಗಿ ತೀವ್ರ ಪೈಪೋಟಿ ನಡೆದಿದೆ. ಇವರ ನಂತರ ಎರಡನೇ ಹಂತದ ನಾಯಕರಾಗಿ ಮಾಜಿ ಡಿಸಿಎಂ ಜಿ. ಪರಮೇಶ್ವರ್, ಮಾಜಿ ಸಚಿವ ಎಂ.ಬಿ ಪಾಟೀಲ್ ಮತ್ತಿತರರ ಹೆಸರುಗಳು ಕೇಳಿ ಬರುತ್ತಿವೆ.

ಪಕ್ಷದ ನಾಯಕತ್ವಕ್ಕಾಗಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ತೆರೆಮರೆಯಲ್ಲಿ ತಮ್ಮದೇ ಆದ ಕಸರತ್ತು ನಡೆಸಿದ್ದಾರೆ. ಮುಂದಿನ ಮುಖ್ಯಮಂತ್ರಿ ವಿಚಾರ ಸಹ ಪ್ರಸ್ತಾಪವಾಗಿ ರಾಜ್ಯದಲ್ಲಿ ಉಂಟಾದ ರಾದ್ಧಾಂತವನ್ನ ಎಲ್ಲರೂ ಗಮನಿಸಿದ್ದಾರೆ.

ಹೀಗಿರುವ ಸಂದರ್ಭದಲ್ಲಿ ರಾಜ್ಯದ ಇಬ್ಬರ ಕಿತ್ತಾಟ ಮೂರನೇಯವರಿಗೆ ಅನುಕೂಲ ಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪಕ್ಷದ ಹೈಕಮಾಂಡ್ ಪಂಜಾಬ್​​ನಲ್ಲಿ ಕೈಗೊಂಡ ಮಾದರಿಯ ನಿಲುವನ್ನೇ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೈಗೊಳ್ಳಲು ತೀರ್ಮಾನಿಸಿದೆ ಎಂಬ ಮಾಹಿತಿ ಇದೆ.

ಪಕ್ಷಕ್ಕೆ ತಳಮಟ್ಟದ ಸಂಘಟನೆ ಒದಗಿಸುವ ಹಾಗೂ ಮುಂಬರುವ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಲು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂಬುದಕ್ಕಿಂತ ಹೊಸ ನಾಯಕತ್ವಕ್ಕೆ ಮಣೆ ಹಾಕುವುದೇ ಉತ್ತಮ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಪಂಜಾಬ್​​ನ ನಿದರ್ಶನ ಒಂದು ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಲಾಗುತ್ತಿದೆ.

ಹೊಂದಾಣಿಕೆಯೇ ಪರಿಹಾರ:

ಮುಂಬರುವ ದಿನಗಳಲ್ಲಿ ಉಭಯ ನಾಯಕರು ಹೊಂದಾಣಿಕೆ ಮಾಡಿಕೊಂಡು ಪಕ್ಷ ಸಂಘಟನೆಗೆ ಮುಂದಾಗದಿದ್ದರೆ, ಹೊಸ ನಾಯಕತ್ವಕ್ಕೆ ಬೆಂಬಲಿಸುವ ನಿರ್ಧಾರಕ್ಕೆ ಹೈಕಮಾಂಡ್ ನಾಯಕರು ಬರಲಿದ್ದಾರೆ ಎಂಬ ಮಾಹಿತಿ ಇದೆ.

ಮೊದಲು ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಂತರ ನಾಯಕತ್ವದ ಮಾತನಾಡಿ ಎಂದು ಕಾಂಗ್ರೆಸ್ ಹಿರಿಯ ನಾಯಕರು ಸಲಹೆ ನೀಡುತ್ತಿದ್ದಾರೆ. ಆದರೆ ಇದುವರೆಗೂ ಅದನ್ನು ತಲೆಗೆ ಹಾಕಿಕೊಳ್ಳದೆ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮದೇ ಆದ ಬೆಂಬಲಿಗರ ಗುಂಪು ಕಟ್ಟಿಕೊಂಡು ನಾಯಕತ್ವ ರೂಪಿಸಿಕೊಳ್ಳುವ ಯತ್ನದಲ್ಲಿದ್ದಾರೆ.

ಪಕ್ಷವನ್ನು ಅಧಿಕಾರಕ್ಕೆ ತರುವ ಬದಲು ವೈಯಕ್ತಿಕ ನಾಯಕತ್ವ ರೂಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿರುವ ನಾಯಕರಿಗೆ ಪಾಠ ಕಲಿಸುವ ಉದ್ದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ ಎನ್ನಲಾಗುತ್ತಿದೆ.

ಈಗಾಗಲೇ ಪಕ್ಷದ ನಾಯಕರು ಹಲವು ಬಾರಿ ಡಿ ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಅವರಿಗೆ ಪಕ್ಷ ಸಂಘಟನೆಗೆ ಒತ್ತು ಕೊಡಿ ಎಂದು ಹೇಳುತ್ತಲೇ ಬಂದಿದೆ. ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಮುಂದಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಇಷ್ಟಾಗಿಯೂ ಸುಧಾರಿಸಿಕೊಳ್ಳದಿದ್ದರೆ ಪಂಜಾಬ್ ಮಾದರಿಯನ್ನೇ ಕರ್ನಾಟಕದಲ್ಲಿಯೂ ಅಳವಡಿಸಲು ಹಿಂಜರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ.

ರಾಜ್ಯದಲ್ಲಿ ಎರಡು ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ನಿಧನದಿಂದ ತೆರವಾಗಿರುವ ಕ್ಷೇತ್ರದಲ್ಲಿ ಕನಿಷ್ಠ ಒಂದನ್ನು ಗೆಲ್ಲುವಂತೆ ಪಕ್ಷದ ಹೈಕಮಾಂಡ್ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯಗೆ ಗುರಿ ನೀಡಿದೆ.

ಈ ಉಪ ಚುನಾವಣೆ ಫಲಿತಾಂಶದ ಬಳಿಕ ಮುಂದಿನ ವಿಧಾನಸಭೆ ಚುನಾವಣೆಗಳು ಹಾಗೂ ಇತರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಿದ್ದತೆ ಕೈಗೊಳ್ಳುವ ಸಂಬಂಧ ಚರ್ಚಿಸಲು ಉಭಯ ನಾಯಕರನ್ನು ದಿಲ್ಲಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಆ ಸಂದರ್ಭ ಮತ್ತೊಮ್ಮೆ ಇವರಿಗೆ ತಾಕೀತು ಮಾಡುವ ನಿರೀಕ್ಷೆ ಇದೆ.

ABOUT THE AUTHOR

...view details