ಬೆಂಗಳೂರು:ಪಂಜಾಬ್ ನ ಅಮೃತಸರದ ಜಲಿಯನ್ ವಾಲಾಬಾಗ್ ಉದ್ಯಾನದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಸಮಾವೇಶ ಸ್ಥಳಕ್ಕೆ ನುಗ್ಗಿದ ಬ್ರಿಟಿಷ್ ಸೈನ್ಯ ಜನರ ಮೇಲೆ ಗುಂಡು ಹಾರಿಸಿತ್ತು. ಭಾರತೀಯರ ಮೇಲೆ ಗುಂಡು ಹಾರಿಸುವಂತೆ ಆದೇಶ ನೀಡಿದ್ದು ಬ್ರಿಟಿಷ್ ಸೇನಾಧಿಕಾರಿ ಜನರಲ್ ಡಯರ್. ಈ ದಾಳಿಯಲ್ಲಿ ಸಾವಿರಾರು ಭಾರತೀಯರು ಅಸುನೀಗಿದರು.
ಸ್ವಾತಂತ್ರ್ಯ ದಿನದ ನಿಮಿತ್ತ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹೆರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 600 ವಿದ್ಯಾರ್ಥಿಗಳು ನೃತ್ಯದ ಮೂಲಕ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದೃಶ್ಯವನ್ನು ಕಣ್ಣೆದುರು ತಂದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದುರಂತದ ದೃಶ್ಯರೂಪಕ ಶತಮಾನದ ಇತಿಹಾಸ ಹೊಂದಿರುವ ಈ ದುರಂತವನ್ನು ದೃಶ್ಯರೂಪಕದ ಮೂಲಕ ಪ್ರಸ್ತುತ ಪಡಿಸಿ ಪ್ರತಿಯೊಬ್ಬರಲ್ಲೂ ದೇಶಾಭಿಮಾನ ಬಡಿದೆಬ್ಬಿಸುವಂತೆ ಮಾಡಿತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಪ್ರದರ್ಶನ ನೀಡಿದ ತಂಡ ಮೊದಲ ಪ್ರಶಸ್ತಿ ಪಡೆದುಕೊಂಡಿತು.
ಈ ಬಾರಿ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಸೇನಾ ಕವಾಯತು, ಸಾಹಸ ಪ್ರದರ್ಶನಗಳು ಈ ಬಾರಿ ನಡೆಯಲಿಲ್ಲ. ಬದಲಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಪಬ್ಲಿಕ್ ಸ್ಕೂಲ್ನಿಂದ 'ಭಾರತಾಂಬೆಯ ಮಡಿಲಿನ ಮಕ್ಕಳ' ಗೀತೆಗೆ 650 ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.
ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್ನ 26 ಸದಸ್ಯರಿಂದ ಜಿಮ್ನಾಸ್ಟಿಕ್ ಮಾಡಲಾಯಿತು. ಮದ್ರಾಸ್ ರೆಜಿಮೆಂಟಲ್ ಸೆಂಟರ್ನ 13 ಸದಸ್ಯರು ಕಲರಿಪಯಟ್ಟು ಪ್ರರ್ದಶಿಸಿದರು. ದೇಶಾಭಿಮಾನ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನ ಕಣ್ಣು ಮಿಟುಕಿಸದಂತೆ ನೋಡುತ್ತಿದ್ದ ದೃಶ್ಯ ಕಂಡು ಬಂತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳಿಗೆ ಸಾರ್ವಜನಿಕರು ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.
ಇನ್ನು ಕಾರ್ಯಕ್ರಮದ ಕೊನೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಮೂರು ವರ್ಷಗಳಿಂದ ಸತತ ಪರೇಡ್ ಮುನ್ನಡೆಸುತ್ತಿರುವ ಕಮಾಂಡರ್ ಯೋಗೇಶ್ ಅವರಿಗೆ ಮೊದಲ ಬಹುಮಾನ ವಿತರಿಸಲಾಯಿತು. ಭದ್ರತಾ ವಿಭಾಗದಲ್ಲಿ ಕೆಎಸ್ಆರ್ ಮೊದಲ ಪ್ರಶಸ್ತಿ ಗಳಿಸಿತು.