ಬೆಂಗಳೂರು:ತಮಗೆ ಸೂಕ್ತ ಖಾತೆ ನೀಡಿಲ್ಲ ಎಂದು ಸಿಟಿ ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳನ್ನ ಸಿಟಿ ರವಿ ಅಲ್ಲಗಳೆದಿದ್ದು, ಈ ಸಂಬಂಧ ರಾತ್ರಿಯೇ ಟ್ವೀಟ್ ಮಾಡಿದ್ದ ಅವರು, ಇಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನಾನು ಪಕ್ಷವನ್ನು ಹೊರತುಪಡಿಸಿ ಬೇರೆಯದನ್ನು ಯೋಚನೆ ಮಾಡುವುದಿಲ್ಲ. ಇದು ನನ್ನ ಬಲವೂ ಹೌದು, ಬಲಹೀನತೆಯೂ ಹೌದು. ನನಗೆ ನೀಡಲಾಗಿರುವ ಖಾತೆ ಅತ್ಯದ್ಬುತವಾದ ಖಾತೆ. ಅದಕ್ಕೆ ನಾನು ಕೃತಜ್ಞನಾಗಿರುತ್ತೇನೆ ಮತ್ತು ಕೆಲಸ ಮಾಡುತ್ತೇನೆ. ಹೀಗಂತಾ ಸಿಟಿ ರವಿ ಟ್ವೀಟ್ ಮಾಡಿ ಸ್ಪಷ್ಟ ಪಡಿಸಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಸಿಟಿ ರವಿ ಸಿದ್ಧಾಂತ ಮತ್ತು ಪಕ್ಷ ನಿಷ್ಠೆಯ ಮುಂದೆ ಅಧಿಕಾರ ಮತ್ತು ಹುದ್ದೆ ಅಡ್ಡ ಬರಲು ಸಾಧ್ಯವಿಲ್ಲ. ನಾನು ಇದ್ದರೂ ಬಿಜೆಪಿ ಸತ್ತರೂ ಬಿಜೆಪಿ.
ಅಧಿಕಾರ ಮತ್ತು ಹುದ್ದೆಯ ಭ್ರಮೆ ಪಕ್ಷ ನಿಷ್ಠೆಯನ್ನು ಮೀರುವ ದಿನ ಬಂದರೆ ಅದು ನನ್ನ ಜೀವನದ ಕೊನೆಯ ದಿನ ಎಂದಿದ್ದರು.
ಮುಂದುವರಿದು ಮತ್ತೊಂದು ಟ್ವೀಟ್ ಮಾಡಿದ್ದ ಅವರು, 1988ರಲ್ಲಿ ಒಂದು ಬೂತ್ ಕಮಿಟಿ ಅಧ್ಯಕ್ಷನಾಗಿದ್ದ ನನಗೆ ಭಾರತೀಯ ಜನತಾ ಪಕ್ಷ ಅದೆಷ್ಟು ಹುದ್ದೆ ನೀಡಿದೆ! ನನ್ನ ಕುಟುಂಬದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಯಾರು ಇರಲಿಲ್ಲ. ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದೆ ಬಿಜೆಪಿ. ನಾನು ಯಾರ ಮುಂದೆಯೂ ಮಂತ್ರಿಸ್ಥಾನವನ್ನೇ ಕೇಳಿರಲಿಲ್ಲ. ಇನ್ನು ಖಾತೆಯ ಬಗ್ಗೆ ಯಾಕೆ ಕೇಳಲಿ ? ಕೆಲವು ನ್ಯೂಸ್ ಚಾನೆಲ್ ಗಳು ನನ್ನ ಪಕ್ಷನಿಷ್ಠೆ ಬಗ್ಗೆಯೇ ಸಂಶಯ ಪಡುತ್ತಿವೆ. ಅಯ್ಯೋ ಪಾಪ. ಅಧಿಕಾರಕ್ಕಾಗಿ ಮಂಡಿಯೂರುವವನೂ ಅಲ್ಲಾ, ಜನಪ್ರೀತಿಗಳಿಸಲು ಅಧಿಕಾರವೇ ಬೇಕೆಂದು ಇಲ್ಲ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದರು.
ಸಿಎಂಗೆ ಕೃತಜ್ಞತೆ ಸಲ್ಲಿಸಿದ ರಾಮುಲು...
ಸಂಪುಟ ಸಚಿವನಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೆ, ನನ್ನ ಪಕ್ಷಕ್ಕೆ ಹಾಗು ಎಲ್ಲ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ . ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ನಮ್ಮ ಕಾರ್ಯಕರ್ತರ ಹಾಗು ಜನತೆಯ ಆಶೀರ್ವಾದ ಕೋರುತ್ತೇನೆ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಅಭಿವೃದ್ಧಿ ಮಂತ್ರ ಜಪಿಸಿದ ಈಶ್ವರಪ್ಪ
ಈಗ ನಮ್ಮೆಲ್ಲರ ದೃಷ್ಟಿ ರಾಜ್ಯದ ಅಭಿವೃದ್ಧಿಯ ಮೇಲೆ ಮಾತ್ರ ಇರಬೇಕು. ಅತಿವೃಷ್ಟಿ-ಅನಾವೃಷ್ಟಿಯಿಂದ ಬಳಲಿರುವ ಜನರಿಗೆ ಬೆಂಬಲಗಾಗಿ ನಿಲ್ಲಬೇಕು. ಪಕ್ಷದ ವರಿಷ್ಠರು ನಿರ್ಧರಿಸಿ ನಿಯೋಜಿಸಿರುವ ಜವಾಬ್ಧಾರಿಯನ್ನು ನಿಭಾಯಿಸಲು ನಾವು ಕಾರ್ಯ ತತ್ಪರರಾಗಬೇಕು. ಯಾವುದೇ ಪ್ರತಿಭಟನೆ, ಅಸಮಾಧಾನಕ್ಕೆ ಆಸ್ಪದ ಕೊಡಬಾರದು ಎಂದು ನನ್ನ ಕಳಕಳಿಯ ಮನವಿ ಎಂದು ಟ್ವೀಟ್ ಮೂಲಕವೇ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.