ಕರ್ನಾಟಕ

karnataka

ETV Bharat / city

24/7 ಹೋಟೆಲ್ ಓಪನ್ ಮಾಡಲು ಅನುಮತಿ ಕೊಡ್ತಾರಾ ಪೊಲೀಸರು?

ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಆದೇಶ ಹೊರಡಿಸಿತ್ತು. ಇದೀಗ 24/7 ಸೇವೆ ನೀಡಲು ಮುಂದಾಗಿದ್ದು, ಈ‌ ನಿಟ್ಟಿನಲ್ಲಿ ಹೋಟೆಲ್ ಮಾಲೀಕರ ಸಂಘವು ಪೊಲೀಸ್ ಇಲಾಖೆಗೆ ಮತ್ತೊಮ್ಮೆ ಪತ್ರ ಬರೆದಿದೆ..

Hotel service
ಹೋಟೆಲ್ ಸೇವೆ

By

Published : Apr 20, 2022, 7:40 PM IST

Updated : Apr 21, 2022, 11:47 AM IST

ಬೆಂಗಳೂರು: ನಗರದಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಆದೇಶ ಹೊರಡಿಸಿತ್ತು. ಆದರೆ, ಕೊರೊನಾ ಹಿನ್ನೆಲೆ ಹೋಟೆಲ್ ಮಾಲೀಕರ ಸಂಘ ಈ ಬಗ್ಗೆ ಕ್ರಮ ತೆಗೆದುಕೊಂಡಿರಲಿಲ್ಲ. ಇದೀಗ ಕೊರೊನಾ ಸೇರಿದಂತೆ ಎಲ್ಲಾ ಅಡೆತಡೆಗಳಿಂದ ಹೊರ ಬಂದಿರುವ ಸಂಘವು ರಾಜಧಾನಿಯಲ್ಲಿ 24/7 ಸೇವೆಗೆ ಅನುಮತಿ ಕೋರಿ ಪೊಲೀಸ್ ಇಲಾಖೆಗೆ ಪತ್ರ ಬರೆದಿದೆ.

ಆದರೆ, ಅನುಮತಿ ನೀಡಲು ನಗರ ಪೊಲೀಸ್ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಅಲ್ಲದೇ ರಾತ್ರಿ ವೇಳೆ ಹೋಟೆಲ್​ಗಳಿಗೆ ಅನುಮತಿ ನೀಡುವುದು ಎಷ್ಟು ಸರಿ ಎಂದು‌ ಪರಾಮರ್ಶೆ ನಡೆಸುತ್ತಿದೆ. ಕಾನೂನು‌ ಸುವ್ಯವಸ್ಥೆ ದೃಷ್ಟಿಯಿಂದ ಅನುಮತಿ ನೀಡುವುದೋ ಅಥವಾ ಬೇಡವೋ ಎಂಬುದರ‌‌ ಬಗ್ಗೆ ಪೊಲೀಸರು ಗೊಂದಲದಲ್ಲಿದ್ದಾರೆ.

ಬೆಂಗಳೂರಿನ ಜನರು ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಾರೆ. ನಿರ್ಮಾಣ ವಲಯದ ಕಾಮಗಾರಿ, ರಾತ್ರಿ ಪಾಳಿ ಕೆಲಸ‌‌ ಮಾಡುವ ಕಾರ್ಮಿಕರು, ಐಟಿಬಿಟಿ ಉದ್ಯೋಗಿಗಳು ಸೇರಿದಂತೆ ಲಕ್ಷಾಂತರ ಮಂದಿ ಕೆಲಸ ಮಾಡುತ್ತಾರೆ. ರಾತ್ರಿ 11 ಗಂಟೆಯಾದರೆ ಊಟ ಸಿಗುವುದು ಕಷ್ಟವಾಗಿತ್ತು. ರಾತ್ರಿ ವೇಳೆ ಹೋಟೆಲ್​ಗಳು ತೆರೆಯಲು ಅವಕಾಶವೇ ಇರಲಿಲ್ಲ.

ಹೋಟೆಲ್ ಮಾಲೀಕರ ಮನವಿಗೆ ಸ್ಪಂದಿಸಿ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ 24/7 ಹೋಟೆಲ್ ತೆರೆಯಲು ಅವಕಾಶ ನೀಡಿತ್ತು. ಇದನ್ನು ಕಾರ್ಯಗತಗೊಳಿಸುವ ಹಂತದಲ್ಲಿರುವಾಗಲೇ ಕೊರೊನಾ ಹರಡಿದ ಪರಿಣಾಮ ತಮ್ಮ ನಿರ್ಧಾರದಿಂದ ಹಿಂದೆ ಸರಿದಿತ್ತು. ಇದೀಗ ಕೊರೊನಾ‌ ದೂರವಾದ ಹಿನ್ನೆಲೆಯಲ್ಲಿ 24/7 ಸೇವೆ ನೀಡಲು ಮುಂದಾಗಿದ್ದು, ಈ‌ ನಿಟ್ಟಿನಲ್ಲಿ ಹೋಟೆಲ್ ಮಾಲೀಕರ ಸಂಘವು ಪೊಲೀಸ್ ಇಲಾಖೆಗೆ ಮತ್ತೊಮ್ಮೆ ಪತ್ರ ಬರೆದಿದೆ.

ರಾಜ್ಯ ಸರ್ಕಾರವೇನೋ ಅನುಮತಿ ನೀಡಿದೆ‌‌. ಆದರೆ, ಕಾನೂನು‌ ಸುವ್ಯವಸ್ಥೆ ಕಾಪಾಡುವ ಹೊಣೆ ನಗರ ಪೊಲೀಸರ ಮೇಲಿದೆ. ಒಂದು ವೇಳೆ ಅನುಮತಿ ನೀಡಿದರೆ ಕಳ್ಳತನ, ಸುಲಿಗೆ, ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ‌. ಇದನ್ನು ತಡೆಯಲು ಪೊಲೀಸರ ಗಸ್ತು ಹೆಚ್ಚಿಸಬೇಕಿದೆ.‌

ಇದನ್ನೂ ಓದಿ:ಬೆಂಗಳೂರಿನಲ್ಲಿ ಇನ್ಮುಂದೆ 24/7 ಹೋಟೆಲ್​ಗಳು ಓಪನ್

24/7 ಸೇವೆ ನೀಡುವುದರಿಂದ‌ ಹಲವು ಮಂದಿಗೆ ಉದ್ಯೋಗ ಸಿಗಲಿದೆ. ಹಣಕಾಸಿನ ವಹಿವಾಟು ಸಹ ಹೆಚ್ಚಾಗಲಿದೆ‌. ಆದರೆ‌, ಇಂತಹ ಸೇವೆ ನೀಡುವ ಹೋಟೆಲ್ ಮಾಲೀಕರು ಭದ್ರತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ರಾತ್ರಿ ವೇಳೆ‌ ಜನ ಸಂಚಾರ ಹೆಚ್ಚಾಗಿರುವ ಕಡೆಗಳಲ್ಲಿ ಹೋಟೆಲ್​​ನಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಸೇರಿದಂತೆ ಅಗತ್ಯ ಕ್ರಮಗಳನ್ನು ಅಳವಡಿಸಬೇಕಿದೆ. ಅನುಮತಿಗೂ ಮುನ್ನ ಸ್ಥಳೀಯ ಹೋಟೆಲ್ ಮಾಲೀಕರು ಆಯಾ ಠಾಣೆಗಳ ಪೊಲೀಸರ ಜೊತೆ ಸಾಧಕ-ಬಾಧಕಗಳ ಕುರಿತು ಚರ್ಚಿಸಬೇಕಿದೆ.

Last Updated : Apr 21, 2022, 11:47 AM IST

ABOUT THE AUTHOR

...view details