ಬೆಂಗಳೂರು: ಪಾಸಿಟಿವ್ ವರದಿ ಬಂದ ವಿದೇಶಿ ಪ್ರಯಾಣಿಕರಿಗೆ ಇನ್ಮುಂದೆ ಹೋಂ ಕ್ವಾರಂಟೈನ್ ರದ್ದುಪಡಿಸಿ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಲು ತೀರ್ಮಾನಿಸಿದ್ದು, ಹೊಸ ವರ್ಷಾಚರಣೆ ಮಾಡಿ ಗೋವಾದಿಂದ ಮರಳಿದವರನ್ನು ಹುಡುಕಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೈರಿಸ್ಕ್ ದೇಶಗಳು ಎಂದು ಕೇಂದ್ರ ಸರ್ಕಾರ ಗುರುತಿಸಿರುವ ದೇಶದಿಂದ ಬರುವ ಪ್ರಯಾಣಿಕರನ್ನು ನಾವು ವಿಮಾನ ನಿಲ್ದಾಣದಲ್ಲೇ ತಪಾಸಣೆ ಮಾಡುತ್ತೇವೆ. ಪಾಸಿಟಿವ್ ಬಂದರೆ ಅಲ್ಲಿಯೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದವರನ್ನು ಇನ್ಮುಂದೆ ಹೋಂ ಕ್ವಾರಂಟೈನ್ ಕಳುಹಿಸುವುದಿಲ್ಲ, ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ಅದಕ್ಕಾಗಿ ತಾರಾ ಹೋಟೆಲ್ಗಳ ವ್ಯವಸ್ಥೆ ಮಾಡಲಾಗುತ್ತದೆ ಅದರ ವೆಚ್ಚ ಅವರೇ ಭರಿಸಬೇಕಾಗುತ್ತದೆ. ಆದರೆ ಬಡ್ಜೆಟ್ ಹೋಟೆಲ್ಗಳಾದರ ಸರ್ಕಾರವೇ ಅದರ ಹಣ ಬರಿಸುತ್ತದೆ ಎಂದರು.
ರಾಜ್ಯ ಮತ್ತು ಬೆಂಗಳೂರಿಗೆ ಪ್ರತ್ಯೇಕ ತಂತ್ರ:
ರಾಜ್ಯದ ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆಗಳ ಸಿದ್ಧತೆ, ಆಕ್ಸಿಜನ್, ಐಸಿಯು ಮತ್ತು ಅಗತ್ಯವಾಗಿ ಬೇಕಾಗಿರುವ ಔಷಧಗಳ ಸರಬರಾಜು ಮತ್ತು ಖರೀದಿ ಸಿದ್ಧತೆಗಳ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡಿ ಯಾವ ರೀತಿ ಸಿದ್ಧತೆ ಮಾಡಬೇಕು ಎನ್ನುವುದನ್ನು ತೀರ್ಮಾನಿಸಿದ್ದೇವೆ. ಕರ್ನಾಟಕಕ್ಕೆ ಒಂದು ರೀತಿಯ ತಂತ್ರ ಮತ್ತು ಬೆಂಗಳೂರಿಗೆ ಪ್ರತ್ಯೇಕ ತಂತ್ರ ಅನುಸರಿಸುತ್ತೇವೆ.
ಮೊದಲ ಮತ್ತು ಎರಡನೇ ಅಲೆಯಲ್ಲಿ ಶೇಕಡಾ 70 ರಿಂದ 80 ರಷ್ಟು ಪಾಸಿಟಿವ್ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದ್ದವು. ಈಗಲೂ ಬೆಂಗಳೂರಿನಲ್ಲಿ ಅದೇ ಪರಿಸ್ಥಿತಿ ಮುಂದುವರೆದಿದೆ. ಶೇಕಡ 80ರಿಂದ 90ರಷ್ಟು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ ಆಗುತ್ತಿವೆ. ಹಾಗಾಗಿ ಬೆಂಗಳೂರನ್ನು ಎಂಟು ವಲಯಗಳನ್ನಾಗಿ ವಿಂಗಡಿಸಿ ಪ್ರತಿ ವಲಯಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡ ಮಾಡಿದ್ದೇವೆ. ಹಾಸಿಗೆಗಳ ಸಿದ್ಧತೆ, ಆಕ್ಸಿಜನ್ ಸೌಲಭ್ಯ, ಸಣ್ಣ ಸಣ್ಣ ವಿಷಯಗಳನ್ನು ಕೂಡ ವೈಜ್ಞಾನಿಕತೆಯಿಂದ ಮತ್ತು ಸಮಗ್ರವಾಗಿ ಶಿಸ್ತಿನಿಂದ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.