ಬೆಂಗಳೂರು:ಐ ಮಾನಿಟರಿ ಅಡ್ವೈಸರಿ (ಐಎಂಎ)ಹಗರಣ ತನಿಖೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲಾಗಿದ್ದು, ಸಂಸ್ಥೆಯ ಮಾಲೀಕ ಆರೋಪಿ ಮನ್ಸೂರ್ ಖಾನ್ ಎಲ್ಲೇ ಅವಿತುಕೊಂಡಿದ್ದರೂ ಬಂಧಿಸಿ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಎಂ ಬಿ ಪಾಟೀಲ ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರೋಪಿ ಮನ್ಸೂರ್ ಬಂಧಿನಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದ್ದೇನೆ. ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡಿದ್ದೇನೆ. ಎಸ್ಐಟಿ ತನಿಖಾಧಿಕಾರಿ ರವಿಕಾಂತೇಗೌಡ ಅವರಿಗೆ ಅಗತ್ಯವಾದ ಸಹಕಾರ ನೀಡಲು ಸರ್ಕಾರ ಸಿದ್ಧ ಎಂದು ಹೇಳಿದ್ದಾರೆ.
ಈಗಾಗಲೇ ಐಎಂಎ ನಿರ್ದೇಶಕರ ಮತ್ತು ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಐಎಂಎ ಆಸ್ತಿ ವಶಕ್ಕೆ ಪಡೆಯಲು ಕಾನೂನು ತಿದ್ದುಪಡಿ ಅಗತ್ಯವಿದೆ. ಇದಕ್ಕೆ ವಿವಿಧ ಇಲಾಖೆಗಳ ನಡುವೆ ಸಹಕಾರಬೇಕು. ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇಲಾಖೆಗಳ ನಡುವೆ ಸಮನ್ವಯ ಸಭೆ ಮಾಡಲಾಗುತ್ತದೆ ಎಂದು ವಿವರಿಸಿದರು.ತಮಿಳುನಾಡಿನಲ್ಲಿ ಹಣಕಾಸು ವಂಚನೆ ಸಂದರ್ಭದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಅಲ್ಲಿಯ ಪೊಲೀಸ್ ಇಲಾಖೆಗೆ ಇದೆ. ಇದೇ ಮಾದರಿ ಕಾನೂನನ್ನು ರಾಜ್ಯದಲ್ಲೂ ತರಲು ಮುಂದಾಗಿದ್ದೇವೆ. ಈ ಜವಾಬ್ದಾರಿಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ವಹಿಸಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಅಹೋರಾತ್ರಿ ಧರಣಿ ಸರಿಯಲ್ಲ:ಜಿಂದಾಲ್ಗೆ ಭೂಮಿಯನ್ನು ಲೀಸ್ ಕಮ್ ಸೇಲ್ ಆಧಾರದ ಮೇಲೆ ಈ ಹಿಂದೆಯೇ ನೀಡಲಾಗಿದೆ. ಇಂದು ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕು. ಇಂದು ಉತ್ತರ ಕರ್ನಾಟಕದಲ್ಲಿ ದೊಡ್ಡ ಉದ್ಯಮವಾಗಿ ಜಿಂದಾಲ್ ಬೆಳೆದಿದೆ. ಈಗಾಗಲೇ ಸಂಪುಟದಿಂದ ಉಪ ಸಮಿತಿ ರಚನೆಯಾಗಿದೆ. ಆದರೂ ಬಿಜೆಪಿ ಅಹೋರಾತ್ರಿ ಧರಣಿ ಮಾಡುವುದು ಸರಿಯಲ್ಲ. ಜಿಂದಾಲ್ ಸಂಸ್ಥೆ ನೀಡಬೇಕಾದ ಕೋಟ್ಯಂತರ ರೂಪಾಯಿ ಬಾಕಿ ಹಣ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್ ಬಾಕಿ ಕಟ್ಟುವಂತೆ ತೀರ್ಪು ಕೊಟ್ಟರೆ ಕಟ್ಟಬೇಕಾಗುತ್ತದೆ. ಅದಕ್ಕೂ ಭೂಮಿ ಲೀಸ್ ಹಾಗೂ ಪರಭಾರೆಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದರು.