ಕರ್ನಾಟಕ

karnataka

By

Published : Mar 19, 2022, 8:08 PM IST

ETV Bharat / city

ಹಿಜಾಬ್ ವಿವಾದ: ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದವನ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಹೈಕೋರ್ಟ್

ನ್ಯಾಯಮೂರ್ತಿಗಳಿಗೆ ಹಿಜಾಬ್ ತೀರ್ಪಿನ ಕಾರಣಕ್ಕಾಗಿ ಮಾರ್ಚ್ 17ರಂದು ತಮಿಳುನಾಡು ತೌಹೀದ್ ಜಮಾತ್ (ಟಿ.ಎಮ್.ಟಿ.ಜೆ) ಹೆಸರಿನ ಮುಸ್ಲಿಂ ಸಂಘಟನೆಯ ಮುಖಂಡ ಆರ್. ರಹಮತುಲ್ಲಾ ಅವರು ಬೆದರಿಕೆ ಹಾಕಿದ್ದರು.

hijab judgment threat call to high court judges
ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ

ಬೆಂಗಳೂರು: ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿ ಹೋಗುವುದು ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ತೀರ್ಪು ಪ್ರಕಟಿಸಿದ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದ ತಮಿಳುನಾಡಿನ ಮುಸ್ಲಿಂ ಸಂಘಟನೆಯ ಮುಖಂಡನ ವಿರುದ್ಧ ಹೈಕೋರ್ಟ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ. ಮುಂದುವರೆದು ಕಾನೂನು ಕ್ರಮ ಜರುಗಿಸಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೂ ಸೂಚನೆ ನೀಡಲಾಗಿದೆ ಎಂದು ಹೈಕೋರ್ಟ್ ಮೂಲಗಳು ತಿಳಿಸಿವೆ.

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ತಮಿಳುನಾಡು ಪೊಲೀಸ್ ಮುಖ್ಯಸ್ಥರೊಂದಿಗೆ ಚರ್ಚೆ:ರಾಜ್ಯದ ಪೊಲೀಸ್ ಮುಖ್ಯಸ್ಥರು ಆರೋಪಿಯ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸುವಂತೆ ತಮಿಳುನಾಡು ಪೊಲೀಸ್ ಮುಖ್ಯಸ್ಥರೊಂದಿಗೆ ಕೂಡ ಚರ್ಚಿಸಿದ್ದಾರೆ. ಈಗ ಹೈಕೋರ್ಟ್ ಈ ಸಂಬಂಧ ಆರೋಪಿ ವಿರುದ್ಧ ವಿಚಾರಣೆ ನಡೆಸಲು ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪದಡಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದೆ.

ವಕೀಲರಿಂದ ಹೈಕೋರ್ಟ್​ಗೆ ದೂರು:ನಗರದ ವಕೀಲರೊಬ್ಬರು ಕೂಡ ಆರೋಪಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್​ಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನ್ಯಾಯಾಂಗದ ಮೇಲಿನ ದಾಳಿಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಆರೋಪಿ ವಿರುದ್ಧ ಎಲ್ಲ ಕಠಿಣ ಕಾನೂನು ಕ್ರಮಗಳು ಜಾರಿಯಾಗಲಿವೆ ಎನ್ನಲಾಗುತ್ತಿದೆ.

ಪ್ರಕರಣದ ಹಿನ್ನಲೆ:ಮಾರ್ಚ್ 17ರಂದು ತಮಿಳುನಾಡು ತೌಹೀದ್ ಜಮಾತ್ (ಟಿ.ಎಮ್.ಟಿ.ಜೆ) ಹೆಸರಿನ ಮುಸ್ಲಿಂ ಸಂಘಟನೆಯ ಮುಖಂಡ ಆರ್. ರಹಮತುಲ್ಲಾ ಮಧುರೈನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ.

ಹಿಜಾಬ್ ತೀರ್ಪಿನ ಕಾರಣಕ್ಕಾಗಿ ನ್ಯಾಯಮೂರ್ತಿಗಳು ಕೊಲೆಯಾದರೆ ಸಾವಿಗೆ ಅವರೇ ಕಾರಣರಾಗುತ್ತಾರೆ. ಮೋದಿ, ಅಮಿತ್ ಶಾ ಅಥವಾ ಯೋಗಿ ಆದಿತ್ಯನಾಥ್​ಗೆ ಹೆದರುವುದಿಲ್ಲ. ಅಲ್ಲಾಗೆ ಮಾತ್ರ ಹೆದರುವುದು. ನಮ್ಮನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಬೇಡಿ. ಒಂದು ತಾಳ್ಮೆ ಕಳೆದುಕೊಂಡರೆ ನೀವು ಉಳಿವುದಿಲ್ಲ ಎಂದು ಹೇಳಿದ್ದ.

ಇದನ್ನೂ ಓದಿ:ದಿ ಕಾಶ್ಮೀರ್​ ಫೈಲ್ಸ್ ಸಿನೆಮಾಗೆ ಸಬ್ಸಿಡಿ ಕೊಟ್ಟ ಸರ್ಕಾರ ಕನ್ನಡದ 'ಜೇಮ್ಸ್' ಚಿತ್ರಕ್ಕೆ ಕೊಡುವುದೇ?

ABOUT THE AUTHOR

...view details