ಬೆಂಗಳೂರು: ನ್ಯಾಯಾಲಯಕ್ಕೆ ಸತ್ಯ ಸಂಗತಿಗಳನ್ನು ಮರೆಮಾಚಿ ಗ್ರಾಮ ಪಂಚಾಯತ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅರ್ಜಿ ಸಲ್ಲಿಸಿದ್ದ ಸಂಸ್ಥೆಗೆ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಡುಮಾರ್ನಾಡ್ ಗ್ರಾಮ ಪಂಚಾಯತ್ ವಿರುದ್ಧ ಎಸ್.ಕೆ.ಎಫ್ ಬಾಯ್ಲರ್ ಆ್ಯಂಡ್ ಡ್ರೈಯರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಸಂಸ್ಥೆ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ತನ್ನ ಲೋಪಗಳು ಹಾಗೂ ಸತ್ಯಾಂಶಗಳನ್ನು ಮುಚ್ಚಿಟ್ಟಿದೆ. ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದೆ. ನ್ಯಾಯಾಂಗವನ್ನು ಕಲುಷಿತಗೊಳಿಸಲು ನಡೆಸುವ ಪ್ರಯತ್ನಗಳನ್ನು ಅತ್ಯಂತ ಕಠಿಣವಾಗಿ ಹತ್ತಿಕ್ಕಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಭತ್ತ ಸಂಸ್ಕರಣೆಗೆ ಪರವಾನಿಗೆ ಪಡೆದು ಸ್ಪ್ರೇ ಪೇಂಟ್ ತಯಾರಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಪರಿಸರ ಕಲ್ಮಶಗೊಳಿಸುತ್ತಿರುವ ಸಂಸ್ಥೆಯನ್ನು ಮುಚ್ಚುವಂತೆ ಗ್ರಾ.ಪಂ. ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ನ್ಯಾಯಾಲಯಕ್ಕೆ ಸತ್ಯ ಮರೆಮಾಚಿದ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ ಸಂಸ್ಥೆಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ, ಅರ್ಜಿ ವಜಾಗೊಳಿಸಿದೆ. ದಂಡದ ಮೊತ್ತವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ 4 ವಾರಗಳಲ್ಲಿ ಪಾವತಿಸುವಂತೆ ಆದೇಶಿಸಿದೆ.