ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರು ಮಂದಿ ಆರೋಪಿಗಳ ಜಾಮೀನು ಅರ್ಜಿ ಮತ್ತು ಓರ್ವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಅಂತ್ಯಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಹಗರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಾದ ಸಿ.ಎನ್.ಶಶಿಧರ್, ಆರ್.ಶರತ್ ಕುಮಾರ್, ಎಚ್.ಯು.ರಘುವೀರ್, ಕೆ.ಸಿ.ದಿಲೀಪ್ ಕುಮಾರ್, ಎಚ್.ಆರ್.ಪ್ರವೀಣ್ ಕುಮಾರ್, ಕೆ.ಸೂರಿ ನಾರಾಯಣ್ ಅವರ ಜಾಮೀನು ಅರ್ಜಿ ಮತ್ತು ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ಪ್ರಸಾದ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿತು.
ನಿನ್ನೆ(ಬುಧವಾರ) ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ನೇತೃತ್ವದ ಏಕಸದಸ್ಯ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ. ಅರ್ಜಿದಾರರ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ವಾದ ಮಂಡಿಸಿದರು. ಸಿಐಡಿಯ ಪರವಾಗಿ ಸರ್ಕಾರಿ ಅಭಿಯೋಜಕರಾದ ವಿ.ಎಸ್.ಹೆಗ್ಡೆ ಪ್ರತಿವಾದ ಮಂಡಿಸಿ ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕೆಂದು ಕೋರಿದರು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾ.ಸಂದೇಶ್, ಸಾಧ್ಯವಾದ್ರೆ ಶುಕ್ರವಾರ ತೀರ್ಪು ಪ್ರಕಟಿಸಲಾಗುವುದು. ಇಲ್ಲವೇ ತೀರ್ಪಿನ ಉಕ್ತಲೇಖನ ನೀಡಲಾಗುವುದು ಎಂದು ಹೇಳಿದರು.
ಹಗರಣದ ಬಗ್ಗೆ ಎಸ್‌ಪಿಪಿ ವಿವರಿಸುತ್ತಿದ್ದಾಗ ನ್ಯಾ.ಸಂದೇಶ್ ಅವರು ಬೇಲಿಯೇ ಎದ್ದು ಹೊಲ ಮೇಯಲು ಏಕೆ ಅವಕಾಶ ನೀಡಿದ್ದೀರಿ?, ಕಪ್ಪು ಕುರಿಗಳನ್ನು ಪತ್ತೆ ಹಚ್ಚುವುದು ಸರ್ಕಾರದ ಕೆಲಸವಲ್ಲವೇ?. ಅಧಿಕಾರಿಗಳೇ ಅಕ್ರಮ ನಡೆಸಲು ಬಾಗಿಲು ತೆರೆದಿದ್ದಾರಲ್ಲವೇ? ಅಂಥವರನ್ನು ಕಠಿಣವಾಗಿ ದಂಡಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನಿಸಿದರು.