ಬೆಂಗಳೂರು:ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರ ಪತ್ನಿಗೆ ಸೇರಿದ್ದ ಮೂರು ಬ್ಯಾಂಕ್ ಖಾತೆಗಳನ್ನು ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸ್ಥಗಿತಗೊಳಿಸಿದ್ದ ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ.
ಬ್ಯಾಂಕ್ ಖಾತೆಗಳನ್ನು ಡಿಫ್ರೀಜ್ಗೊಳಿಸುವ ಮೂಲಕ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಪತ್ನಿ ಶ್ವೇತಾ ವಿಕ್ಟರ್ಗೆ ರಿಲೀಫ್ ನೀಡಿದೆ. 2021ರ ಮಾರ್ಚ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ವೇಳೆ ಅಧಿಕಾರಿ ತನಿಖೆಗೆ ಸಹಕರಿಸದೇ ಇದ್ದುರಿಂದ ಪತ್ನಿ ಶ್ವೇತಾ ವಿಕ್ಟರ್ಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಕೂಡ ಸ್ಥಗಿತಗೊಳಿಸಲಾಗಿತ್ತು.
ಓದಿ:Sweet basil: ಸಿಹಿ ತುಳಸಿ.. ಸಕ್ಕರೆ ಕಾಯಿಲೆ ಪೀಡಿತರಿಗೆ ಈ ಗಿಡಮೂಲಿಕೆ ಪರಿಹಾರ
ಇದನ್ನು ಪ್ರಶ್ನಿಸಿ ಶ್ವೇತಾ ವಿಕ್ಟರ್ ಭ್ರಷ್ಟಾಚಾರ ತಡೆ ಪ್ರಕರಣಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ತನಿಖೆಯ ಉದ್ದೇಶಕ್ಕಾಗಿ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಅಗತ್ಯವಿಲ್ಲ. ತಾನು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದರಿಂದ ದೈನಂದಿನ ವ್ಯವಹಾರಗಳಿಗೂ ಸಮಸ್ಯೆಗಳಾಗುತ್ತಿವೆ. ಖಾತೆಗಳಲ್ಲಿದ್ದ ಹಣ ಅಕ್ರಮವಾಗಿ ಗಳಿಸಿದ ಸಂಪಾದನೆಯ ಭಾಗವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದರೆ, ಆ ಮೊತ್ತವನ್ನು ಮರು ಠೇವಣಿ ಮಾಡಲಾಗುವುದು ಎಂದು ವಾದಿಸಿದ್ದರು.
ಪ್ರಾಸಿಕ್ಯೂಷನ್ ಪರ ವಕೀಲರು ಖಾತೆಗಳನ್ನು ಡಿಫ್ರೀಜ್ ಮಾಡಬಾರದು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಖಾತೆಗಳನ್ನು ಸ್ಥಗಿತಗೊಳಿಸುವುದರಿಂದ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಈಗಾಗಲೇ ಹೇಳಿದೆ.
ಪ್ರಕರಣ ಇತ್ಯರ್ಥವಾಗುವವರೆಗೆ ಖಾತೆಗಳನ್ನು ಬಿಡುಗಡೆಗೊಳಿಸಬಾರದು ಎಂದು ಕೋರಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್ ಅವರು ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ವೇಳೆ ಇದ್ದ 1.1 ಲಕ್ಷ ರೂಪಾಯಿ ಮೊತ್ತವನ್ನು ಠೇವಣಿ ಇಡುವಂತೆ ಷರತ್ತು ವಿಧಿಸಿ, ಖಾತೆಗಳ ಬಿಡುಗಡೆಗೆ ಆದೇಶಿಸಿತು.