ಕರ್ನಾಟಕ

karnataka

ETV Bharat / city

ಸಿಎಂ ಯಡಿಯೂರಪ್ಪ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್! - ಬೆಂಗಳೂರು ಸುದ್ದಿ

2019ರ ನವಂಬರ್ 23ರಂದು ಗೋಕಾಕ್ ಉಪ ಚುನಾವಣಾ ಪ್ರಚಾರದ ವೇಳೆ ನೀತಿಸಂಹಿತೆ ಉಲ್ಲಂಘಿಸಿದ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

High Court on injunction order against CM BS Yeddyurappa
ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

By

Published : Aug 27, 2020, 10:44 PM IST

ಬೆಂಗಳೂರು: ವಿಧಾನಸಭೆ ಉಪಚುನಾವಣೆ ಸಂದರ್ಭದಲ್ಲಿ ನೀತಿಸಂಹಿತೆ ಉಲ್ಲಂಘಿಸಿದ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಹಾಗೂ ಗೋಕಾಕ್​ನ ಜೆಎಂಎಫ್​ಸಿ ಕೋರ್ಟ್ ಸೆಪ್ಟೆಂಬರ್ 1ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿಮಾಡಿದ್ದ ಸಮನ್ಸ್ ರದ್ದು ಕೋರಿ ಬಿ.ಎಸ್​.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಸುದೀರ್ಘ ವಾದ- ಪ್ರತಿವಾದ ಆಲಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತಲ್ಲದೇ, ವಿಚಾರಣಾ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್​​ಗೆ ತಡೆಯಾಜ್ಞೆ ನೀಡಿತು.

ಇದಕ್ಕೂ ಮುನ್ನ ಯಡಿಯೂರಪ್ಪ ಪರ ವಾದಿಸಿದ ವಕೀಲರು, ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ 'ಬಿ' ರಿಪೋರ್ಟ್ ತಿರಸ್ಕರಿಸಿದ್ದಲ್ಲದೇ, ಪ್ರಕರಣವನ್ನು ಸಂಜ್ಞೇಯ ಅಪರಾಧ ಎಂದು ಪರಿಗಣಿಸಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ತನಿಖಾಧಿಕಾರಿಗಳು ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸುವುದು ಇದ್ದರೆ, ನ್ಯಾಯಾಲಯ ದೂರುದಾರರ ಹೇಳಿಕೆ ಪಡೆದುಕೊಂಡು ಯಾವ ಕಾರಣಕ್ಕೆ 'ಬಿ' ರಿಪೋರ್ಟ್ ತಿರಸ್ಕರಿಸಲಾಗುತ್ತಿದೆ ಎಂಬುದನ್ನು ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ನ್ಯಾಯಾಲಯ ಪ್ರಕ್ರಿಯೆ ಅನುಸರಿಸಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ಹಾಗೂ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ:

2019ರ ನವಂಬರ್ 23ರಂದು ಗೋಕಾಕ್ ಉಪ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ್ದ ಬಿ.ಎಸ್​.ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮಾಜದ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಲು ಕಾರ್ಯಕರ್ತರಿಗೆ ಕರೆ ನೀಡಿರುವುದು ನೀತಿಸಂಹಿತೆ ಉಲ್ಲಂಘನೆ ಎಂದು ಆರೋಪಿಸಿದ್ದ ದೂರುದಾರರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು. ಆದರೆ, 'ಬಿ' ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಬಿಎಸ್​ವೈಗೆ ಸೂಚಿಸಿತ್ತು.


ABOUT THE AUTHOR

...view details