ಬೆಂಗಳೂರು:ಪರಿಸರ ಸಂರಕ್ಷಣೆ ಕಾಯ್ದೆ ರೂಪಿಸುವಾಗ ಸಂಸತ್ತು ವಿದೇಶಿ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದೆ ಎಂದು ಲಿಖಿತ ಆಕ್ಷೇಪಣೆ ಸಲ್ಲಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ದಂಡ ವಿಧಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.
100ಕಿ.ಮೀ ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಪರಿಸರ ಪರಿಣಾಮ ಅಧ್ಯಯನ (ಇಐಎ) ಬದಿಗಿಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಯುನೈಟೆಡ್ ಕನ್ಸರ್ವೇಷನ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ಹಾಜರಾದ ಹಿರಿಯ ವಕೀಲ ಉದಯ್ ಹೊಳ್ಳ ಅವರು ವಾದಿಸಿ, ಪಿಐಎಲ್ಗೆ ಆಕ್ಷೇಪಣೆ ಸಲ್ಲಿಸುವ ವೇಳೆ ಅಂತಹ ಹೇಳಿಕೆ ದಾಖಲಿಸಿರುವುದು ಸರಿ ಅನ್ನಿಸುವುದಿಲ್ಲ. ತ್ವರಿತವಾಗಿ ಆಕ್ಷೇಪಣೆ ಸಲ್ಲಿಸುವ ಭರದಲ್ಲಿ ಹಾಗೆ ಹೇಳಲಾಗಿದೆ. ಇದರಲ್ಲಿ ಅಧಿಕಾರಿಗಳ ಪಾತ್ರವಿಲ್ಲ. ಹೀಗಾಗಿಯೇ, ಲಿಖಿತ ಆಕ್ಷೇಪಣೆ ಸಲ್ಲಿಸಿದ ವಕೀಲರನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ವಿವರಿಸಿದರು.