ಬೆಂಗಳೂರು:8ನೇ ತರಗತಿ ಓದುತ್ತಿರುವ ಬಾಲಕಿಯನ್ನು ಪೋಷಕರ ಸಮ್ಮತಿ ಇಲ್ಲದೆ ಪ್ರೀತಿ, ಪ್ರೇಮದ ನೆಪದಲ್ಲಿ ಮನೆಯಿಂದ ಹೊರಗೆ ಕರೆದೊಯ್ದಿದ್ದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾದಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಪ್ರಕರಣದ ಆರೋಪಿಯಾಗಿರುವ ದ್ವಿತೀಯ ಪಿಯು ವಿದ್ಯಾರ್ಥಿ, ‘ಇದೇ ಏಪ್ರಿಲ್ 22ರಿಂದ ಪರೀಕ್ಷೆ ಆರಂಭವಾಗುತ್ತಿದ್ದು, ನನಗೆ ಪರೀಕ್ಷೆ ಬರೆಯಲು ಜಾಮೀನು ನೀಡಬೇಕು’ ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಆರೋಪಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ.
ಓದಿ:ರಸ್ತೆ ಗುಂಡಿ ಮುಚ್ಚಲು 36 ಗಂಟೆಗಳಲ್ಲಿ ಕಾಮಗಾರಿ ಕಾರ್ಯಾದೇಶ ನೀಡಿ: ಪಾಲಿಕೆಗೆ ಹೈಕೋರ್ಟ್ ತಾಕೀತು
ಆರೋಪಿಯು ಒಂದು ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಭದ್ರತೆ ಬಾಂಡ್ ನೀಡಬೇಕು. ಪರೀಕ್ಷೆ ಮುಗಿದ ನಂತರ ತಕ್ಷಣ ಮೇ 11ರ ಸಂಜೆ 6 ಗಂಟೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ವಯಂ ಶರಣಾಗಬೇಕು. ಪರೀಕ್ಷೆ ಬರೆಯಲು ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಬೇಕು. ಆರೋಪಿ ವಾಸ ಮಾಡುವ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗೆ ತೆರಳಿ ಪ್ರತಿದಿನ ಸಂಜೆ 6 ಗಂಟೆಗೆ ಸಹಿ ಮಾಡಬೇಕು. ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು. ಕೋರ್ಟ್ ಅನುಮತಿ ಇಲ್ಲದೆ ವ್ಯಾಪ್ತಿ ಪ್ರದೇಶ ಬಿಟ್ಟು ಹೊರಗೆ ಹೋಗಬಾರದು. ಒಂದೊಮ್ಮೆ ಆರೋಪಿ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಪ್ರಾಸಿಕ್ಯೂಷನ್ ಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಿದೆ.
ಅಪ್ಪ–ಅಮ್ಮ ಮನೆಯಲ್ಲಿ ಇಲ್ಲದ ವೇಳೆ ನನ್ನ ತಂಗಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಆರೋಪಿಗಳು ಮನೆಯಿಂದ ಹೊರಗೆ ಕರೆದೊಯ್ದು ಸುತ್ತಾಡಿಸಿಕೊಂಡು ಬಂದಿದ್ದರು. ಈ ವೇಳೆ ಮನೆಯೊಳಗೆ ಬಂದ ಅವರನ್ನು ಹೊರಹೋಗುವಂತೆ ಸೂಚಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಸಂತ್ರಸ್ತೆಯ ಅಕ್ಕ ಇದೇ ಏಪ್ರಿಲ್ 14ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012ರ (ಪೊಕ್ಸೊ) ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 354, 354(ಡಿ), 323, 504 ಹಾಗೂ 34ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.