ಬೆಂಗಳೂರು :ಕನ್ನಡ ಪರ ಸಂಘಟನೆಗಳು ಡಿ. 5ರಂದು ಕರೆ ನೀಡಿದ್ದ ‘ಕರ್ನಾಟಕ ಬಂದ್’ ವೇಳೆ ಸಂಘಟನೆಗಳು ರ್ಯಾಲಿ ನಡೆಸಿರುವ ವರದಿ ಸಲ್ಲಿಸುವಂತೆ ಹೈಕೋರ್ಟ್ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ. ‘
ಇದೇ ವೇಳೆ ನಿಯಮ ಉಲ್ಲಂಘಿಸಿದ ಗಣ್ಯರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವ ಮನಸ್ಸಿಲ್ಲವೇ ಎಂದು ಪ್ರಶ್ನಿಸಿರುವ ಪೀಠ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರನ್ನು ದಂಡಿಸಲು ಜಾರಿಗೊಳಿಸಿದ್ದ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯನ್ನು ಮೂಲೆಗೆ ತಳ್ಳಿರುವುದೇಕೆ ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ವಕೀಲರು, ಡಿ.5ರಂದು ರ್ಯಾಲಿ ನಡೆಸಲು ಪೊಲೀಸರು ಅನುಮತಿ ನೀಡಿಲ್ಲ.
ಮೆರವಣಿಗೆ ನಡೆಸುವವರನ್ನು ಯಶಸ್ವಿಯಾಗಿ ತಡೆಯಲಾಗಿದೆ. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಮಾಸ್ಕ್ ಧರಿಸದ 100ಕ್ಕೂ ಅಧಿಕ ಮಂದಿ ವಿರುದ್ಧ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗಿದೆ. ರ್ಯಾಲಿಗೆ ಕರೆ ನೀಡಿದ್ದ ಕನ್ನಡ ವಾಟಾಳ್ ಪಕ್ಷದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.
ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದಿಸಿ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರ್ಯಾಲಿ ನಡೆಸಿದರು. ಆದರೆ, ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ದಂಡವನ್ನೂ ಸಹ ವಸೂಲು ಮಾಡಿಲ್ಲ. ಮೊದಲು ನಿಯಮ ಉಲ್ಲಂಘಿಸಿದ ಸಂಸ್ಥೆಗಳಿಗೆ ₹50ಸಾವಿರ ದಂಡ ವಿಧಿಸಲು ಅವಕಾಶವಿತ್ತು. ಆದರೆ, ಆ ನಿಯಮ ತಿದ್ದುಪಡಿ ಮಾಡಿ ಸರ್ಕಾರ ದಂಡದ ಮೊತ್ತವನ್ನು ₹10 ಸಾವಿರಕ್ಕೆ ಇಳಿಸಿದೆ. ಆ ಮೂಲಕ ಸಂಘಟನೆಗಳಿಗೆ ನಿಯಮ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಓದಿ:ಕಾಂಗ್ರೆಸ್ ನಾಯಕರ ವಿರುದ್ಧ ವಿವಾದಾತ್ಮಕ ಫೋಸ್ಟ್; ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‌ಐಆರ್ ದಾಖಲು
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ದಂಡದ ಮೊತ್ತ ತಗ್ಗಿಸಿರುವುದು ಸರ್ಕಾರದ ನೀತಿ. ಆದರೆ, ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಯಾವ ಕಾರಣಕ್ಕೆ ಸಂಘಟನೆಯಿಂದ ದಂಡ ವಸೂಲು ಮಾಡಿಲ್ಲ ಎಂದು ಪ್ರಶ್ನಿಸಿತು. ಜತೆಗೆ ಹಲವು ಬಾರಿ ನ್ಯಾಯಾಲಯ ಆದೇಶ ನೀಡಿದರೂ ನಿಯಮ ಪಾಲಿಸದವರ ವಿರುದ್ಧ ಏಕೆ ಕ್ರಿಮಿನಲ್ ವಿಚಾರಣೆ ನಡೆಸುತ್ತಿಲ್ಲ. ಹೀಗಾಗಿ, ಸರ್ಕಾರ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯನ್ನು ಮೂಲೆಗೆ ತಳ್ಳಿರುವುದೇಕೆ ಎಂಬ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಡಪಡಿಸಬೇಕು ಎಂದು ನಿರ್ದೇಶಿಸಿತು.
ಇದರ ಜೊತೆಗೆ ಬೆಂಗಳೂರಿನಲ್ಲಿ ರ್ಯಾಲಿ ನಡೆದಿದೆಯೇ, ಇಲ್ಲವೇ ಎಂಬುದರ ಬಗ್ಗೆ ಹಾಗೂ ಸಂಘಟನೆಗೆ ಏಕೆ ದಂಡ ವಿಧಿಸಿಲ್ಲ ಎಂಬ ಬಗ್ಗೆ ನಗರ ಪೊಲೀಸ್ ಆಯುಕ್ತರು ಜ. 11ರೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.