ಬೆಂಗಳೂರು:ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಅಕ್ಟೋಬರ್ 29 ರಿಂದ 30ರವರೆಗೆ ಗುಡುಗು ಸಿಡಿಲು ಸಹಿತ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ಭಾಗಗಳಲ್ಲಿ ಕಡಿಮೆ ಒತ್ತಡದ (ವಾಯುಭಾರ ಕುಸಿತ) ಪ್ರದೇಶ ನಿರ್ಮಾಣಗೊಂಡಿದೆ. ಹೀಗಾಗಿ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹೇಳಿದೆ.
ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಕಳೆದ ನಾಲೈದು ದಿನಗಳಿಂದ ವಿಶ್ರಾಂತಿ ನೀಡಿದ್ದ ಮಳೆರಾಯ ಅಬ್ಬರಿಸಲು ಶುರು ಮಾಡಲಿದ್ದಾನೆ. ಅ 29 ರಿಂದ ಆರಂಭವಾಗುವ ಮಳೆ ಅಕ್ಟೋಬರ್ 30ರವೆರೆಗೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ. ಇಂದು ಮಧ್ಯ ರಾತ್ರಿಯೇ ಬೆಂಗಳೂರಿನಲ್ಲಿ ಮಳೆರಾಯ ತನ್ನ ಆರ್ಭಟ ತೋರಿಸುವ ಸಾಧ್ಯತೆಗಳಿವೆ ಎಂದಿದೆ.
ಮುಂದಿನ 48 ಗಂಟೆಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ - heavy rain in state
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ಮುಂದಿನ 48 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿರಿ:T20 World Cup 2021: ವಾರ್ನರ್ ಫಿಫ್ಟಿ, ಕಾಂಗರೂಗಳಿಗೆ ಲಂಕಾ ವಿರುದ್ಧ 7 ವಿಕೆಟ್ ಗೆಲುವು
ಮೈಸೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಮಳೆಯ ಸಾಧ್ಯತೆಗಳಿವೆ. ಬಳ್ಳಾರಿಯಲ್ಲಿ ಬೇಸಿಗೆ ವಾತಾವರಣ ಇರಲಿದೆ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಮಾಹಿತಿ ನೀಡಿದೆ.
ಕೆಲವು ಜಿಲ್ಲೆಗಳಲ್ಲಿ ಒಣ ಹವೆ:ಬೆಳಗಾವಿ, ಬೀದರ್, ಕಲಬುರಗಿ,ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಕೋಲಾರ, ಉಡುಪಿ, ಹಾಸನ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದಿದೆ.
ನಗರದಲ್ಲಿ ಶೀತ ಗಾಳಿ:ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಹೆಚ್ಚಿದೆ. ಚಳಿಗಾಲ ಆರಂಭ ದಿನಗಳಾಗಿದ್ದರಿಂದ, ಬೆಳಗಿನ ಜಾವ ಮತ್ತು ಸಂಜೆ ಶೀತ ಗಾಳಿಯ ಅನುಭವ ಆಗಲಿದೆ ಎಂದು ಇಲಾಖೆ ಹೇಳಿದೆ.
ಬಹುತೇಕ ಡ್ಯಾಂ ಬರ್ತಿ:ಭಾರಿ ಮಳೆಗೆ ರಾಜ್ಯದಲ್ಲಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಸುರಿಯುತ್ತಿರುವ ಮಳೆಗೆ ರಾಜ್ಯದ ಬಹುತೇಕ ಡ್ಯಾಂಗಳು ಭರ್ತಿಯಾಗಿವೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ಡ್ಯಾಂಗಳ ಎಲ್ಲಾ ಗೇಟ್ ತೆರೆಯುವ ಸಾಧ್ಯತೆಗಳಿದ್ದು, ಆದ್ದರಿಂದ ನದಿ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ ಎಂದಿದೆ.
ಮೀನುಗಾರರಿಗೆ ಎಚ್ಚರಿಕೆ:ಕರಾವಳಿ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದೆ.