ಬೆಂಗಳೂರು: ಚೀನಾದ ಕೆಲ ನಗರಗಳಲ್ಲಿ ಮತ್ತು ಕೆಲ ದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ನಾಲ್ಕನೇ ಅಲೆಗೆ ಇದುವೇ ಕಾರಣವಾಗುವ ಭೀತಿ ಹೆಚ್ಚಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್, ಚೀನಾ ಸೇರಿದಂತೆ ಬೇರೆ ದೇಶಗಳಲ್ಲಿ ಸೋಂಕು ಹೆಚ್ಚಳವಾಗಿದ್ದು ಈ ಬಗ್ಗೆ ಗಮನ ನೀಡಲಾಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಹೆಚ್ಚಾಗುತ್ತಿರುವ ದೇಶ, ನಗರಗಳ ಬಗ್ಗೆ ಮಾಹಿತಿ ಪಡೆಯುತ್ತಿವೆ. ಕೋವಿಡ್ ನಿಯಂತ್ರಿಸುವಲ್ಲಿ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮುಂದಿನ ದಿನಗಳಲ್ಲಿ ಸಭೆ ನಡೆಸಿ ಚರ್ಚಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಹೆಚ್ಚಳದ ಬಗ್ಗೆ ಮಾಧ್ಯಮದವರೊಂದಿಗೆ ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡುತ್ತಿರುವುದು ಏಪ್ರಿಲ್ನಲ್ಲಿ ನಾಲ್ಕನೇ ಅಲೆ ಭೀತಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಲಸಿಕೆ ಪಡೆದವರು ಕೂಡ ಮುಂಜಾಗ್ರತಾ ಕ್ರಮಗಳನ್ನು ಮರೆಯುವ ಹಾಗಿಲ್ಲ. ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದರೆ ಲಸಿಕೆ ನೀಡಿರುವುದರಿಂದ ನಿಯಂತ್ರಣಕ್ಕೆ ಬಂದಿದೆ. ಈ ವಿಚಾರದಲ್ಲಿ ಸಾಗಬೇಕಾದ ಹಾದಿ ದೂರವಿದೆ. ಇನ್ನೂ ಹಲವು ಅಲೆಗಳು ಬರಬಹುದು ಎಂಬ ಆತಂಕವಿದೆ. ಲಸಿಕಾಕರಣದಿಂದ ಅದೆಲ್ಲವನ್ನೂ ದೂರ ಮಾಡಬಹುದು. ಮಾಸ್ಕ್, ಭೌತಿಕ ಅಂತರದ ಮೂಲಕ ಮುಂಜಾಗ್ರತ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ.
ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ:ಯುದ್ಧ ಪೀಡಿತ ಉಕ್ರೇನ್ ನಿಂದ ವಾಪಸಾದ ವೈದ್ಯಕಿಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕೇಂದ್ರ ಸರ್ಕಾರದ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಹೇಳಿದ್ದಾರೆ.
ಓದಿ :ನಮ್ಮ ಮೆಟ್ರೊ ರೈಲುಗಳ ಮೇಲೆ ಕಲ್ಲು ತೂರಾಟ : ಭದ್ರತಾ ಕಣ್ಗಾವಲು ಹೆಚ್ಚಿಸಿದ ಬಿಎಂಆರ್ಸಿಎಲ್