ಬೆಂಗಳೂರು: ಪಿಎಸ್ ಐ ನೇಮಕಾತಿ ಪ್ರಕರಣವನ್ನು ಹದಿನೈದು ದಿನದಲ್ಲಿ ಮುಚ್ಚಿಹಾಕುತ್ತಾರೆ ನೋಡುತ್ತಿರಿ. ಸರ್ಕಾರ ಎಲ್ಲಾದಕ್ಕೂ ಮೌನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಇಂದು ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೌನಂ ಸಮ್ಮತಿ ಲಕ್ಷಣಂ ಅನ್ನುವ ರೀತಿ ಸರ್ಕಾರ ವರ್ತಿಸುತ್ತಿದೆ. ಮೌನದಿಂದ ಎಲ್ಲದಕ್ಕೂ ಸಮ್ಮತಿ ಅನ್ನೋ ಹಾಗೆ ಎಂದು ಲೇವಡಿ ಮಾಡಿದರು.
ಪಿಎಸ್ಐ ನೇಮಕಾತಿ ಹಗರಣ ಪ್ರಕರಣವನ್ನು ಇನ್ನು ಹದಿನೈದೇ ದಿನದಲ್ಲಿ ಮುಚ್ಚಿಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಶ್ವತ್ಥನಾರಾಯಣ ಬಗ್ಗೆ ಎಲ್ಲರಿಗೂ ಗೊತ್ತಿದೆ : ಸಚಿವ ಅಶ್ವತ್ಥನಾರಾಯಣ ಬಗ್ಗೆ ಮೃದು ಧೋರಣೆ ಇಲ್ಲ. ದಾಖಲೆ ಇಟ್ಟು ಮಾತನಾಡಿ ಎಂದು ಅಷ್ಟೇ ಹೇಳಿದ್ದೇನೆ. ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಅಶ್ವತ್ಥನಾರಾಯಣ ಏನು ಮಾಡಿದ್ದರು ಎಂದು ಗೊತ್ತಿದೆ. ನರ್ಸ್ ಗಳಿಗೆ ಪರೀಕ್ಷೆ ಬರೆಯದೇ ಇರುವವರಿಗೂ ಸರ್ಟಿಫಿಕೇಟ್ ಕೊಡಿಸಿದ್ದರು. ಅದನ್ನಾದರೂ ಪ್ರತಿಪಕ್ಷದ ನಾಯಕರು ಮಾತನಾಡಬೇಕಲ್ಲಾ. ಈ ಬಗ್ಗೆ ದಾಖಲೆ ಇಟ್ಟು ಮಾತನಾಡಬೇಕು ಎಂದು ಹೇಳಿದ್ದಾರೆ. ಜೊತೆಗೆ ಅಶ್ವತ್ಥ ನಾರಾಯಣ ಅವರಿಗೆ ಒಕ್ಕಲಿಗ ಸಮುದಾಯದ ಮೇಲೆ ಅಕ್ಕರೆ ಬಂದಿದೆ. ವಿಶ್ವ ಒಕ್ಕಲಿಗರೆಲ್ಲಾ ನಮ್ಮವರು ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಹೀಗೆ ಆಗುತ್ತಿರಲಿಲ್ಲ. ನನ್ನ ಮೇಲೂ ಕೆಪಿಎಸ್ಸಿ ಸದಸ್ಯರನ್ನು ಮಾಡಲು ಸಿದ್ದರಾಮಯ್ಯ ಒತ್ತಡ ಹಾಕಿದ್ದರು. ಆದರೆ ನಾನು ಅವರ ಬಗ್ಗೆ ಗೊತ್ತಿರುವುದಕ್ಕೆ ಮಾಡಲಿಲ್ಲ. ಹುದ್ದೆ ವಿಚಾರದಲ್ಲಿ ಏನೆಲ್ಲ ಮಾಡಿದ್ದಾರೆ ಎಂದು ಗೊತ್ತಿದೆ ಎಂದಿದ್ದಾರೆ. ದುಡ್ಡು ಕೊಟ್ಟು ಬಂದವರು ನ್ಯಾಯಯುತವಾಗಿ ಕೆಲಸ ಮಾಡ್ತಾರಾ?. ಬಡವರ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಜನ ಅರಿತುಕೊಳ್ಳಬೇಕು ಅಷ್ಟೇ. ಈ ಹಿಂದೆ ದಾಖಲೆ ಸಮೇತ ಜನರ ಮುಂದೆ ಮಾಹಿತಿ ಇಟ್ಟಿದ್ದೇನೆ. ಆದರೆ ಅದರ ಪ್ರತಿಫಲ ಏನಾಯ್ತು? ಎಂದು ಪ್ರಶ್ನಿಸಿದರು. ಈ ನಾಡಿನಿಂದ ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರಗಿಡಿ. ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಿ ಎಂದು ಅಷ್ಟೇ ನಾನು ರಾಜ್ಯದ ಜನತೆಗೆ ಕೇಳಿಕೊಳ್ಳುವುದು ಎಂದರು. ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪೇಪರ್ ಲೀಕ್ ಆಗಿತ್ತು. ಅಗ ಶಿವಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಈಗ ಅವನು ಹೊರಗೆ ಇದ್ದಾನೆ. ಪಿಎಸ್ ಐ ನೇಮಕಾತಿ ಹಗರಣವೂ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.
ಇಂದು ಕೋರ್ ಕಮಿಟಿ ಸಭೆ ಇದೆ. ಬಂಡೆಪ್ಪ ಕಾಶೆಂಪೂರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಒಟ್ಟು 30 ಜಿಲ್ಲೆಯ ಅಧ್ಯಕ್ಷರ ಜೊತೆ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು. ಮೇ 13 ರಂದು ಜನತಾ ಜಲಧಾರೆ ಬೃಹತ್ ಕಾರ್ಯಕ್ರಮ ಇದೆ. ನಾಲ್ಕರಿಂದ ಐದು ಲಕ್ಷ ಜನ ಆ ಕಾರ್ಯಕ್ರಮಕ್ಕೆ ಸೇರುತ್ತಾರೆ ಎಂದು ತಿಳಿಸಿದರು.
ಓದಿ :ಡಿಸೆಂಬರ್ 2023ಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್ನಿಂದ ಸಸ್ಪೆಂಡ್ ಆಗ್ತಾರೆ: ಸಚಿವ ಮುನಿರತ್ನ ಭವಿಷ್ಯ