ಬೆಂಗಳೂರು:ರಾಗಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈ ಎಸ್ ವಿ ದತ್ತಾ ಅವರು ರಾಗಿ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ದತ್ತರವರು ಹೇಳಿದಂತೆ ಸಣ್ಣ ದೊಡ್ಡ ರೈತರು ಎಂಬ ಬೇಧ ಬೇಡ ಅಂತ ಹೇಳಿದ್ದಾರೆ. ನನ್ನದೂ ಕೂಡ ಅದೇ ಅಭಿಪ್ರಾಯ ಎಂದು ಹೇಳಿದರು.
ರಾಗಿ ಬೆಳೆಗೆ ಕೇಂದ್ರ ಸರ್ಕಾರ ಎಂಎಸ್ಪಿಯಡಿ 3,377 ರೂ.ಗಳನ್ನು ಘೋಷಣೆ ಮಾಡಿದೆ. ಕಳೆದ ಬಾರಿ 3,295 ರೂ. ಇತ್ತು, ಕೇವಲ 52 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಯಾವ ಆಧಾರದ ಮೇಲೆ 52 ರೂಪಾಯಿ ಹೆಚ್ಚಳ ಮಾಡಿದ್ದಾರೋ ಗೊತ್ತಿಲ್ಲ. ನೆಪ ಮಾತ್ರಕ್ಕೆ 52 ರೂ. ಹೆಚ್ಚಳ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಹೋರಾಟ ನಿರಂತರವಾಗಿ ರೈತರ ಪರವಾಗಿ, ನಾವೆಲ್ಲಾ ರೈತ ಕುಟುಂಬದವರೇ. ಹಾಗಾಗಿ ಅವರಿಗೆ ಅನ್ಯಾಯವಾದಾಗ ನಾನು ಅವರ ಪರವಾಗಿ ನಿಲ್ಲುತ್ತೇನೆ. ಪ್ರತಿ ಕ್ವಿಂಟಾಲ್ ರಾಗಿಗೆ 4 ಸಾವಿರ ರೂಪಾಯಿಯನ್ನಾದರೂ ಕೊಡಬೇಕು. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಅಷ್ಟೇ. ಇಂದು ಗೊಬ್ಬರದ ರೇಟ್ ಎಷ್ಟಾಗಿದೆ ಗೊತ್ತಾ ಎಂದು ಪ್ರಶ್ನಿಸಿದರು.
ಪ್ರಧಾನಿ ಜೊತೆ ಚರ್ಚಿಸುವೆ:ಫೆಬ್ರವರಿ 20 ರಂದು ದೆಹಲಿಗೆ ಹೋಗುತ್ತೇನೆ. ಈಗ ಇತರ ರಾಜ್ಯಗಳ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಪ್ರಧಾನಮಂತ್ರಿ ಅವರ ಭೇಟಿಗೆ ಸಮಯ ಕೇಳುತ್ತೇನೆ. ಅವರ ಭೇಟಿಗೆ ಅವಕಾಶ ಸಿಕ್ಕರೆ ಎಲ್ಲಾ ವಿಷಯವನ್ನು ಅವರ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ನಾನು ಪ್ರಧಾನಿ ಆಗಿದ್ದಾಗ ಏನೆಲ್ಲ ಕೊಟ್ಟೆ ಎಂದು ಹೇಳಲು ಹೋಗಲ್ಲ. ಈಗ ನಾನು ರಾಜ್ಯಸಭಾ ಸದಸ್ಯನಾಗಿದ್ದೇನೆ. ಮೊನ್ನೆ ಅಧಿವೇಶನದಲ್ಲಿ ಬಜೆಟ್ ಬಗ್ಗೆ ರಾಷ್ಟ್ರಪತಿ ಭಾಷಣದ ಬಗ್ಗೆ ಮಾತಾಡಿದ್ದೇನೆ ಎಂದು ಹೇಳಿದರು.
ಹಿಜಾಬ್ ವಿಚಾರನ್ನು ಸರ್ಕಾರ ಆರಂಭದಲ್ಲಿಯೇ ತಡೆಯಬೇಕಿತ್ತು. ಮಕ್ಕಳು ಶಿಕ್ಷಣಕ್ಕಿಂತಲೂ ಹಿಜಾಬ್ಗಾಗಿ ಹೋರಾಟ ಮಾಡ್ತಿದಾರೆ. ಇದನ್ನು ಹೀಗೆಯೇ ಹರಡಲು ಬಿಡಬೇಡಿ. ವಿದ್ಯಾರ್ಥಿಗಳು ಕೋರ್ಟ್ ಆದೇಶವನ್ನು ಪಾಲಿಸದೇ ಇರುವುದು ಸರಿಯಲ್ಲ ಎಂದು ದೇವೇಗೌಡರು ಹೇಳಿದರು.
ಓದಿ:ಈಶ್ವರಪ್ಪ ನಾಲಿಗೆ ಹರಿತಕ್ಕೆ ಬಿಜೆಪಿ ನಾಯಕರೇ ವಿಲ ವಿಲ: ಪದೇ ಪದೆ ಮುಜುಗರಕ್ಕೊಳಗಾಗುತ್ತಿರುವ ಕೇಸರಿ ನಾಯಕರು